ಪ್ರಾರ್ಥನಾ ಮಂದಿರಗಳಲ್ಲಿ ಮಾನಸಿಕ ಆರೋಗ್ಯದ ಚಿಕಿತ್ಸೆಗೆ ಯೋಜನೆ : ದಿನೇಶ್ ಗುಂಡೂರಾವ್

Update: 2024-10-28 17:01 GMT

ಬೆಂಗಳೂರು : ಪ್ರಾರ್ಥನಾ ಮಂದಿರಗಳಾದ ದೇವಸ್ಥಾನ, ಚರ್ಚ್ ಹಾಗೂ ದರ್ಗಾ ಮಾನಸಿಕ ಆರೋಗ್ಯದ ಚಿಕಿತ್ಸೆ, ಸಲಹೆಯನ್ನು ನೀಡುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಸೋಮವಾರ ಇಲ್ಲಿನ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ (ಬಿಎಂಸಿಆರ್‌ಐ) ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಏರ್ಪಡಿಸಿದ್ದ ‘ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ’ ಉದ್ಘಾಟಿಸಿ ಅವರು ಮಾತನಾಡಿದರು.

ಮಾನಸಿಕ ಆರೋಗ್ಯ ವಿಚಾರದಲ್ಲಿ ಕರ್ನಾಟಕ ದೇಶಕ್ಕೆ ಮಾದರಿಯಾಗಿದೆ. ಈಚೆಗೆ ಹೆಚ್ಚಿನ ಜನ ಸೇರುವ ದರ್ಗಾ, ದೇವಸ್ಥಾನ, ಚರ್ಚ್‍ಗಳಲ್ಲೂ ಮಾನಸಿಕ ಆರೋಗ್ಯದ ಚಿಕಿತ್ಸೆ, ಸಲಹೆಯನ್ನು ನೀಡುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಟೆಲಿ ಮನಸ್ ಮೂಲಕ ಸಮಸ್ಯೆಯುಳ್ಳವರಿಗೆ ನೇರವಾಗಿ ಕೌನ್ಸೆಲಿಂಗ್ ಮಾಡುವ ವ್ಯವಸ್ಥೆ ನಮ್ಮಲ್ಲಿದೆ ಎಂದು ಮಾಹಿತಿ ನೀಡಿದರು.

ಸರಕಾರಿ ಅಥವಾ ಖಾಸಗಿ ಸಂಸ್ಥೆಯ ಉದ್ಯೋಗಿಯ ಮಾನಸಿಕ ಒತ್ತಡಕ್ಕೆ ಪರಿಹಾರ ಒದಗಿಸುವ ಸೌಲಭ್ಯವನ್ನು ಆಯಾ ಸಂಸ್ಥೆಗಳು ಕಲ್ಪಿಸಲು ಮುಂದಾಗಬೇಕೆಂದ ಅವರು, ಸಂಸ್ಥೆಗಳು ಹೆಚ್ಚಿನ ಒತ್ತಡ ಹೇರದೆ ಗಂಭೀರ ಪರಿಣಾಮಕ್ಕೆ ವ್ಯಕ್ತಿ ತುತ್ತಾಗುವುದನ್ನು ತಡೆಯಬೇಕು. ಅವರ ಕೆಲಸದ ಒತ್ತಡ ಗಮನಿಸಿ ತಮ್ಮ ಸಮಸ್ಯೆ ಹೇಳಿಕೊಳ್ಳುವ, ಪರಿಹಾರ ಕಂಡುಕೊಳ್ಳುವ ಸೌಲಭ್ಯ ಒದಗಿಸಬೇಕು ಎಂದು ಹೇಳಿದರು.

ಬಹುಮುಖ್ಯವಾಗಿ ಈಚೆಗೆ ಕೌಟುಂಬಿಕ ವ್ಯವಸ್ಥೆಯಲ್ಲಿ ಸಂವಹನದ ತೊಡಕಿನಿಂದ ಮಾನಸಿಕ ಸಮಸ್ಯೆ ವಿಪರೀತ ಆಗಿರುವುದನ್ನು ಕಾಣುತ್ತಿದ್ದೇವೆ. ಇಂತ ಸಂದರ್ಭದಲ್ಲಿ ಸಮಸ್ಯೆಯನ್ನು ಹೇಳಿಕೊಳ್ಳಲು ಮುಕ್ತ ವಾತಾವರಣ ಒದಗಿಸುವುದು ಅಗತ್ಯ. ಇಲ್ಲದಿದ್ದರೆ ಆತ್ಮಹತ್ಯೆಯಂತ ದುರ್ಘಟನೆಗಳು ಆಗಬಹುದು. ಮಾನಸಿಕ ಸಮಸ್ಯೆ ಮುಜುಗರ, ಅವಮಾನದ ವಿಚಾರವಲ್ಲ ಎಂದು ಮನದಟ್ಟು ಮಾಡಿಕೊಡಬೇಕು ಎಂದರು.

ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎನ್.ಕುಮಾರ್ ಮಾತನಾಡಿ, ದೈಹಿಕ ಬಾಧೆಗಳನ್ನು ಮೀರಿ ಮಾನಸಿಕ ಸಮಸ್ಯೆಯೇ ಮೊದಲ ಸ್ಥಾನ ಪಡೆಯುತ್ತಿದೆ. ವಿಪರೀತ ಮೊಬೈಲ್ ಬಳಕೆ ಕೂಡ ಮಾನಸಿಕ ಸಮಸ್ಯೆಗೆ ದಾರಿ ಮಾಡಿಕೊಡುತ್ತಿದೆ. ಭಾರತದಲ್ಲಿ ಶೇ.17ರಷ್ಟು ಮಾನಸಿಕ ಆರೋಗ್ಯದ ಸಮಸ್ಯೆ ಕಂಡು ಬಂದಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಸಕ ಬಿ.ಉದಯ್ ಬಿ.ಗರುಡಾಚಾರ್, ಮನಶಾಸ್ತ್ರಜ್ಞ ಡಾ.ಎ.ಜಗದೀಶ್, ಆರೋಗ್ಯ ಇಲಾಖೆ ಆಯುಕ್ತ ಕೆ.ಬಿ.ಶಿವಕುಮಾರ್, ಬಿಎಂಸಿಆರ್‌ಐ ನಿರ್ದೇಶಕಿ ಡಾ.ಎಂ.ಜಿ.ತ್ರಿವೇಣಿ, ಪ್ರಾಧಿಕಾರದ ಉಪ ನಿರ್ದೇಶಕಿ ಡಾ.ಪಿ.ರಜನಿ ಇತರರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News