ಜನಪರ ಕಾಯ್ದೆಗಳ ಮೂಲಕ ದೇಶದ ಭವಿಷ್ಯ ಬದಲಾಯಿಸಿದವರು ಮನಮೋಹನ್ ಸಿಂಗ್: ಡಿ.ಕೆ.ಶಿವಕುಮಾರ್

Update: 2024-12-28 12:26 GMT

Screengrab : x/@DKShivakumar

ಹೊಸದಿಲ್ಲಿ: ಜನಪರ ಕಾಯ್ದೆಗಳ ಮೂಲಕ ಭಾರತ ದೇಶದ ಭವಿಷ್ಯವನ್ನು ಬದಲಾಯಿಸಿದವರು ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಂದಿಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಶನಿವಾರ ದಿಲ್ಲಿಯಲ್ಲಿ ಮನಮೋಹನ್ ಸಿಂಗ್ ಅವರ ಪಾರ್ಥಿವ ಶರೀರಕ್ಕೆ ಪುಷ್ಪಗುಚ್ಛ ಇರಿಸಿ, ಅಂತಿಮ ನಮನ ಸಲ್ಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅರಣ್ಯ ಭೂಮಿ ಹಕ್ಕು ಕಾಯ್ದೆ, ಆಹಾರ ಭದ್ರತಾ ಕಾಯ್ದೆ, ಉದ್ಯೋಗ ಖಾತ್ರಿ ಯೋಜನೆ, ಶಿಕ್ಷಣದ ಹಕ್ಕು ಕಾಯ್ದೆಗಳು ಗ್ರಾಮೀಣ ಭಾಗದ ಜನರ ಏಳಿಗೆಗೆ ಕಾರಣವಾಯಿತು ಎಂದರು.

ಮಾಹಿತಿ ಹಕ್ಕು ಸೇರಿದಂತೆ ಹಲವಾರು ಯೋಜನೆಗಳು ಆಡಳಿತದಲ್ಲಿ ಪಾರದರ್ಶಕತೆ ತಂದವು. ಆರೋಗ್ಯ ಕ್ಷೇತ್ರದಲ್ಲಿ ಆಶಾ ಕಾರ್ಯಕರ್ತರ ಯೋಜನೆ ಜಾರಿಗೆ ತಂದರು. ತಾವು ಜಾರಿಗೊಳಿಸಿದ ಅನೇಕ ಕಾಯ್ದೆಗಳ ಮೂಲಕ ಸಿಂಗ್ ಅವರು ಜನಸಾಮಾನ್ಯರ ನಡುವೆ ಇಂದಿಗೂ ಜೀವಂತವಾಗಿದ್ದಾರೆ. ಸಿಂಗ್ ಜನಸಾಮಾನ್ಯರ ಬದುಕಿನಲ್ಲಿ ಬದಲಾವಣೆ ತಂದವರು ಎಂದು ಶಿವಕುಮಾರ್ ನುಡಿದರು.

ಭೂ ಸ್ವಾಧೀನವಾದ ನಂತರ ಅನೇಕ ರೈತರಿಗೆ ತಕ್ಕ ಪರಿಹಾರ ಸಿಗುತ್ತಿರಲಿಲ್ಲ. ರೈತರ ಭೂಮಿಗೆ ನ್ಯಾಯಯುತವಾದ ಪರಿಹಾರ ನೀಡಿದರು. ಸಮಾಜದ ಎಲ್ಲ ವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡು ಆಡಳಿತ ನಡೆಸಿದರು. ಮಾಧ್ಯಮಗಳು ಹಾಗೂ ವಿಪಕ್ಷಗಳು ಸಿಂಗ್ ಅವರ ಕೆಲಸಗಳನ್ನು ಈಗ ನೆನಪಿಸಿಕೊಳ್ಳುತ್ತಿವೆ ಎಂದು ಹೇಳಿದರು.

ಸಂವಿಧಾನ ಹಾಗೂ ನಮ್ಮ ನೆಲದ ಕಾನೂನುಗಳನ್ನು ರಕ್ಷಣೆ ಮಾಡಿದವರು ಸಿಂಗ್. ಆರ್ಥಿಕ ಸಚಿವರಾಗಿದ್ದ ಕಾಲದಿಂದ ಇಲ್ಲಿಯತನಕ ಈ ದೇಶದ ಆರ್ಥಿಕತೆಯನ್ನು ಸುಭದ್ರವಾಗಿ ಇಡಲು ಶ್ರಮಿಸಿದರು. ಇದನ್ನು ವಿಪಕ್ಷದವರು ಒಪ್ಪಿದ್ದಾರೆ. ಸೋನಿಯಾ ಗಾಂಧಿ ತಮಗೆ ದೊರೆತ ಪ್ರಧಾನಿಯಾಗುವ ಅವಕಾಶವನ್ನು ನಿರಾಕರಿಸಿ, ಈ ದೇಶಕ್ಕೆ ಉತ್ತಮ ಆರ್ಥಿಕ ತಜ್ಞನ ಅವಶ್ಯಕತೆಯಿದೆ ಎಂದು ಅಧಿಕಾರ ತ್ಯಾಗ ಮಾಡಿದರು. ನೆಹರೂ-ಗಾಂಧಿ ಕುಟುಂಬದ ತ್ಯಾಗವನ್ನು ಈ ದೇಶದ ಇತಿಹಾಸ ಮರೆಯುವುದಿಲ್ಲ ಎಂದರು.

ಸ್ಮಾರಕಕ್ಕೆ ಜಾಗ ನೀಡದಿರುವುದು ತಪ್ಪು: ಸಿಂಗ್ ಸ್ಮಾರಕ ನಿರ್ಮಾಣಕ್ಕೆ ಅವಕಾಶ ನೀಡದ ಕೇಂದ್ರ ಸರಕಾರದ ಕ್ರಮ ಸರಿಯಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೇಳಿದ್ದರಲ್ಲಿ ತಪ್ಪಿಲ್ಲ. ಕೇಂದ್ರ ಸರಕಾರ ಹೃದಯ ಶ್ರೀಮಂತಿಕೆಯನ್ನು ತೋರಿಸಬೇಕಾಗಿತ್ತು. ಒಳ್ಳೆಯ ಮನಸುಗಳು ಈ ಕೆಲಸಕ್ಕೆ ಹೃದಯ ಶ್ರೀಮಂತಿಕೆಯನ್ನು ತೋರಿಸಲಿ ಎಂದು ನಂಬಿದ್ದೇವೆ. ಈಗಲೂ ಕಾಂಗ್ರೆಸ್ ಬೇಡಿಕೆಗೆ ಮನ್ನಣೆ ದೊರೆಯುತ್ತದೆ ಎನ್ನುವ ವಿಶ್ವಾಸವಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News