ಹೊಸ ವರ್ಷಾಚರಣೆ ಹಿನ್ನೆಲೆ : ಪೊಲೀಸರ ಸೂಚನೆ, ಸಲಹೆ ಪಾಲನೆಗೆ ಮನವಿ
ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ಹಿನ್ನೆಲೆ ಪೊಲೀಸರು ಸೂಚಿಸಿರುವ ಸಲಹೆಗಳನ್ನು ನಾಗರಿಕರು ಪಾಲನೆ ಮಾಡುವಂತೆ ಪೊಲೀಸ್ ಆಯುಕ್ತ ದಯಾನಂದ್ ಮನವಿ ಮಾಡಿದ್ದಾರೆ.
ಹಿರಿಯ ನಾಗರಿಕರು, ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಸಾರ್ವಜನಿಕರು ನೀತಿ, ನಿಯಮ ಉಲ್ಲಂಘಟನೆ ಮಾಡಬಾರದು. ಪ್ರಮುಖವಾಗಿ ಸಂಚಾರ ನಿಯಮ ಕಡ್ಡಾಯವಾಗಿ ಪಾಲನೆ ಮಾಡುವಂತೆ ಕೋರಿದ್ದಾರೆ.
ಸಾರ್ವಜನಿಕರು ಶಾಂತಿ ಮತ್ತು ಶಿಸ್ತು ಕಾಪಾಡಲು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯೊಂದಿಗೆ ಸಹಕರಿಸಬೇಕು. ಪೊಲೀಸರು ಮತ್ತು ಸ್ಥಳೀಯ ಆಡಳಿತದಿಂದ ಅನುಮೋದಿಸಲ್ಪಟ್ಟ ಅಧಿಕೃತ ಸ್ಥಳಗಳಲ್ಲಿ ಮಾತ್ರ ಆಚರಣೆ ಮಾಡಬೇಕು. ತುರ್ತು ಸಂದರ್ಭಗಳಲ್ಲಿ ಪೊಲೀಸ್ ಸಹಾಯವಾಣಿ (112), ಸಮೀಪದ ಪೊಲೀಸ್ ಠಾಣೆ ಅಥವಾ ಪೊಲೀಸ್ ಕಿಯೋಸ್ಕ್ ಅನ್ನು ಸಂಪರ್ಕಿಸುವಂತೆ ಅವರು ಹೇಳಿದ್ದಾರೆ.
ಸಾರ್ವಜನಿಕರು ಜನಸಂದಣಿಯಿರುವ ಸ್ಥಳಗಳಲ್ಲಿ ಹೆಚ್ಚು ಜಾಗರೂಕತೆಯಿಂದ ಇರಬೇಕು. ಯಾವುದೇ ಅಹಿತಕರ ಘಟನೆ ಅಥವಾ ಕಾನೂನು ಬಾಹಿರ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣ ಹತ್ತಿರದ ಪೊಲೀಸರಿಗೆ ಮಾಹಿತಿ ನೀಡಬೇಕು. ಸಾರ್ವಜನಿಕರು ತಮ್ಮ ಚಲನವಲನಗಳ ಬಗ್ಗೆ ಕುಟುಂಬಕ್ಕೆ ಆಗಿಂದಾಗ್ಗೆ ಮಾಹಿತಿ ನೀಡಿ.ಜತೆಗೆ ಮೊಬೈಲ್ ಸೇರಿದಂತೆ ತಮ್ಮ ವಸ್ತುಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.
ಇತರೆ ಯಾವುದೇ ಧರ್ಮದವರ ಭಾವನೆಗಳಿಗೆ ಘಾಸಿಯಾಗದಂತೆ ವರ್ಷಾಚರಣೆ ಮಾಡುವಂತೆ ಹೇಳಿರುವ ಆಯುಕ್ತರು, ಆಟೊ ಮತ್ತು ಕ್ಯಾಬ್‍ಗಳಲ್ಲಿ ಪ್ರಯಾಣಿಸುವಾಗ ಅಧಿಕೃತವೇ ಎಂಬುದನ್ನು ಖಾತ್ರಿಪಡಿಸಿಕೊಳ್ಳತಕ್ಕದ್ದು, ಪೊಲೀಸರು ಸೂಚಿಸಿರುವ ರಸ್ತೆಗಳಲ್ಲಿಯೇ ಸಂಚರಿಸಿ. ಮದ್ಯಪಾನ ಮತ್ತು ಮಾದಕ ವಸ್ತುಗಳನ್ನು ಸೇವಿಸಿ ವಾಹನ ಚಾಲನೆ ಮಾಡಬಾರದು. ಪಟಾಕಿಗಳನ್ನು ಸಿಡಿಸಿ ಪರಿಸರ ಮಾಲಿನ್ಯ ಉಂಟಾಗುವುದನ್ನು ತಪ್ಪಿಸತಕ್ಕದ್ದು ಎಂದು ಅವರು ಹೇಳಿದ್ದಾರೆ.