ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ; ಕರವೇ ಪಾತ್ರ ದೊಡ್ಡದು : ವಿ.ಸೋಮಣ್ಣ
ಬೆಂಗಳೂರು : ರೈಲ್ವೆ ಇಲಾಖೆಯೂ ಸೇರಿದಂತೆ ಕೇಂದ್ರ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡ ಭಾಷೆಯಲ್ಲಿ ಬರೆಯಲು ಅವಕಾಶ ದೊರೆಯುವಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಅದರ ಅಧ್ಯಕ್ಷ ಟಿ.ಎ.ನಾರಾಯಣಗೌಡರ ಪಾತ್ರವು ದೊಡ್ಡದಿದೆ ಎಂದು ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.
ಶನಿವಾರ ನಗರದ ಅರಮನೆ ಮೈದಾನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ನಡೆದ ‘ಹೆಸರಾಯಿತು ಕರ್ನಾಟಕ 50ರ ಸಂಭ್ರಮ’ ಮತ್ತು ಪ್ರತಿಜ್ಞಾ ಸ್ವೀಕಾರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೇಂದ್ರ ಮಟ್ಟದ ನೇಮಕಾತಿಗಳಿಗೆ ಕೇವಲ ಹಿಂದಿಭಾಷೆಯಲ್ಲಿ ಮಾತ್ರ ಪರೀಕ್ಷೆಗಳು ನಡೆಯುತ್ತಿದ್ದವು. ಇದರಿಂದ ಕನ್ನಡಿಗರಿಗೆ ಕೇಂದ್ರದಲ್ಲಿ ಉದ್ಯೋಗ ಮಾಡುವ ಅವಕಾಶ ಕ್ಷೀಣಿಸುತ್ತಿತ್ತು. ವೇದಿಕೆಯು ನಿರಂತರ ಹೋರಾಟ, ಚಳವಳಿಗಳನ್ನು ಕೈಗೊಂಡಿದ್ದರ ಫಲವಾಗಿ ಕನ್ನಡ ಭಾಷೆಯಲ್ಲೂ ಪರೀಕ್ಷೆ ಬರೆಯುಲು ಅವಕಾಶ ಸಿಕ್ಕಂತೆ ಆಯಿತು ಎಂದು ಹೇಳಿದರು.
ರೈಲ್ವೆ ಇಲಾಖೆಯ ರಾಜ್ಯ ಸಚಿವನಾಗಿ ನಾನು ಅಧಿಕಾರ ಸ್ವೀಕರಿಸಿದ ಮೇಲೆ ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲೂ ಪರೀಕ್ಷೆ ಬರೆಯಲು ಆದೇಶ ನೀಡಿದೆ. ಈ ಅವಕಾಶಕ್ಕೆ ಭಾರತ ಸರಕಾರದಷ್ಟೇ ಪ್ರಯತ್ನ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಅವರೂ ಶ್ರಮವೂ ಇದೆ ಎನ್ನುವುದನ್ನು ಮರೆಯಬಾರದು ಎಂದು ವಿ.ಸೋಮಣ್ಣ ತಿಳಿಸಿದರು.
ಕನ್ನಡ, ಕರ್ನಾಟಕಕ್ಕಾಗಿ ಟಿ.ಎ.ನಾರಾಯಣಗೌಡರು ಮೂರು ದಶಕಗಳ ಕಾಲ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಅವರ ಹೋರಾಟದ ಫಲವಾಗಿ ಅನೇಕ ಸವಲತ್ತುಗಳು ಕನ್ನಡಿಗರಿಗೆ ದಕ್ಕಿವೆ. ಅವರ ಅನೇಕ ಯೋಜನೆಗಳು ಮತ್ತು ಕನಸುಗಳು ಯಶಸ್ಸು ಕಂಡಿವೆ. ನಿಜಕ್ಕೂ ಟಿ.ಎ.ನಾರಾಯಣಗೌಡ ಅವರು ಕನ್ನಡಿಗರ ಆಸ್ತಿ ಎಂದರೆ ತಪ್ಪಾಗಲಾರದು ಎಂದು ವಿ.ಸೋಮಣ್ಣ ಶ್ಲಾಘಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರ ಸದಾ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಟಿ.ಎ.ನಾರಾಯಣಗೌಡರ ಜೊತೆ ಇರುತ್ತದೆ. ಅವರ ದೂರದೃಷ್ಟಿ ಮತ್ತು ಚಿಂತನೆಗಳ ಸಾಕಾರಕ್ಕೆ ನಮ್ಮ ಸರಕಾರ ಯಾವತ್ತೂ ಸ್ಪಂದಿಸುತ್ತದೆ ಎಂದು ವಿ.ಸೋಮಣ್ಣ ತಿಳಿಸಿದರು.
ಸಮಾರಂಭದಲ್ಲಿ ಗದಗದ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ, ಚಿತ್ರದುರ್ಗ ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಗೌರಿಗದ್ದೆಯ ಸ್ವರ್ಣ ಪೀಠಿಕಾಪುರದ ವಿನಯ್ ಗುರೂಜಿ, ಕಸಾಪ ಮಾಜಿ ಅಧ್ಯಕ್ಷ ಡಾ.ಆರ್.ಕೆ.ನಲ್ಲೂರು ಪ್ರಸಾದ್ ಮಾತನಾಡಿದರು. ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಸೇರಿ ಹಲವರು ಉಪಸ್ಥಿತರಿದ್ದರು.
60 ಸಾವಿರ ಹುದ್ದೆಗಳ ಭರ್ತಿ: ‘ರೈಲ್ವೆ ಹಾಗೂ ಜಲಶಕ್ತಿ ಇಲಾಖೆಯಲ್ಲಿ ಮುಂದಿನ ನಾಲ್ಕು ತಿಂಗಳೊಳಗೆ 60 ಸಾವಿರ ಹುದ್ದೆಗಳ ಭರ್ತಿ ಮಾಡಲಾಗುವುದು. ಈ ಪರೀಕ್ಷೆಗಳಲ್ಲಿ ಶೇ.20-25ರಷ್ಟು ಕನ್ನಡಿಗರು ಆಯ್ಕೆಯಾದರೆ ನನ್ನ ಮತ್ತು ಕರವೇ ನಾರಾಯಣಗೌಡರ ಶ್ರಮ ಸಾರ್ಥಕವಾಗುತ್ತದೆ ಎಂದು ಸಚಿವ ವಿ. ಸೋಮಣ್ಣ ತಿಳಿಸಿದರು.