ಜೆಡಿಎಸ್ ಈಗ ಜಾತ್ಯತೀತ ಪಕ್ಷವಾಗಿಯೇ ಉಳಿದಿದೆಯೇ? : ಸಿಎಂ ಸಿದ್ದರಾಮಯ್ಯ ಪ್ರಶ್ನೆ

Update: 2024-12-01 14:25 GMT

ಸಿದ್ದರಾಮಯ್ಯ

ಬೆಂಗಳೂರು : ರಾಜ್ಯದ ಜನರಿಗೆ ಕೃತಜ್ಞತೆ ಹೇಳಲು ಕಾಂಗ್ರೆಸ್ ಪಕ್ಷ ಮತ್ತು ಸ್ವಾಭಿಮಾನಿಗಳ ಒಕ್ಕೂಟದಿಂದ ಹಾಸನದಲ್ಲಿ ಸಮಾವೇಶ ಏರ್ಪಡಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಮತ್ತು ಸ್ವಾಭಿಮಾನಿಗಳ ಜಂಟಿ ಆಶ್ರಯದಲ್ಲಿ ನಡೆಯುತ್ತಿದೆ. ಇದಕ್ಕೆ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಲಾ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನೂ ಆಹ್ವಾನಿಸಲಾಗಿದೆ. ಪಕ್ಷವು ಇದರಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದೆ ಎಂದು ವಿವರಣೆ ನೀಡಿದರು.

ಜೆಡಿಎಸ್ ಪಕ್ಷವನ್ನು ಕಟ್ಟಿದವರು ನಾವು. ಜೆಡಿಎಸ್ ಇದೀಗ ಜಾತ್ಯತೀತ ಪಕ್ಷವಾಗಿಯೇ ಉಳಿದಿದೆಯೇ?. ಆ ಪಕ್ಷ ಕೋಮುವಾದಿಗಳ ಜೊತೆಗೆ ಸೇರಿದ ಮೇಲೆ ಯಾವ ಜಾತ್ಯತೀತವಾಗಿದೆ?. ಸಂವಿಧಾನದಲ್ಲಿ ಜಾತ್ಯತೀತ, ಸಮಾಜವಾದಿ ಎಂದು ಸೇರ್ಪಡೆಯಾಗಿದೆ. ಸುಪ್ರೀಂ ಕೋರ್ಟ್ ‘ಜಾತ್ಯತೀತ’ ಇರಲೇಬೇಕು ಎಂದು ಹೇಳಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಕಾನೂನಿನ ಚೌಕಟ್ಟಿನೊಳಗೆ ಬಂದರೆ ಕ್ರಮ :

ವಿಶ್ವ ಒಕ್ಕಲಿಗರ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ ಪ್ರಕರಣದಲ್ಲಿ ಪೊಲೀಸರು ಕಾನೂನಿನ ದೃಷ್ಟಿಯಲ್ಲಿ ಏನು ಮಾಡಬೇಕೋ ಅದನ್ನು ಮಾಡುತ್ತಾರೆ. ಕಾನೂನಿನ ಚೌಕಟ್ಟಿನೊಳಗೆ ಬಂದರೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಇಲ್ಲವಾದರೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಾನು ಜೆಡಿಎಸ್ ಬಿಡಲಿಲ್ಲ. ಬದಲಿಗೆ ನನ್ನನ್ನು ದೇವೇಗೌಡ ಉಚ್ಚಾಟಿಸಿದರು. ನಂತರ ನಾನು ಬೇರೆ ದಾರಿ ಇಲ್ಲದೆ ಅಹಿಂದ ಸಮಾವೇಶ ನಡೆಸಿದೆ. ಹಾಸನದಲ್ಲಿ ಸಮಾವೇಶ ಮಾಡಿದ್ದೆ. ಜೆಡಿಎಸ್‍ನವರಿಗೆ ಪಕ್ಷ ಯಾವ ಹಿನ್ನೆಲೆಯಲ್ಲಿ ಕಟ್ಟಲಾಗಿದೆ ಎಂದು ಗೊತ್ತಿಲ್ಲ. ಪಕ್ಷ ರಚನೆಗೊಂಡಾಗ ಕುಮಾರಸ್ವಾಮಿ ಇರಲಿಲ್ಲ. ನಾನು ದೇವೇಗೌಡ, ಇಬ್ರಾಹಿಂ, ಸತೀಶ್ ಜಾರಕಿಹೊಳಿ, ಮಹದೇವಪ್ಪ, ವೆಂಕಟೇಶ್, ಲಕ್ಷ್ಮಿಸಾಗರ್ ಸೇರಿ ಆಗಿದ್ದು. ದೇವೇಗೌಡ ರಾಷ್ಟ್ರೀಯಾಧ್ಯಕ್ಷರಾದರು, ನಾನು ರಾಜ್ಯಾಧ್ಯಕ್ಷನಾದೆ ಎಂದು ಸಿದ್ದರಾಮಯ್ಯ ಸ್ಮರಿಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News