ಮಹಿಳೆಯರು ಭಯ ಬಿಟ್ಟು ಹೋರಾಡಿ : ಡಾ.ನಾಗಲಕ್ಷ್ಮೀ ಚೌದರಿ
ಬಾಗಲಕೋಟೆ : ದೌರ್ಜನ್ಯಕ್ಕೆ ಸಿಲುಕಿದ ಮಹಿಳೆಯರು ಯಾವುದೇ ರೀತಿಯ ಭಯ ಇಲ್ಲದೇ ಹೋರಾಟ ಮಾಡಲು ಮುಂದಾಗಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌದರಿ ತಿಳಿಸಿದ್ದಾರೆ.
ಬುಧವಾರ ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಿಳೆಯರಿಗೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಪೊಲೀಸ್ ವರಿಷ್ಟಾಧಿಕಾರಿ ಹೆಚ್ಚಿನ ಗಮನ ನೀಡಬೇಕು. ಸ್ಥಳಿಯ ಪೊಲೀಸ್ ಠಾಣೆಗಳಿಗೆ ಮಹಿಳೆಯರು ಭೇಟಿ ನೀಡಿದ ಸಂದರ್ಭದಲ್ಲಿ ನೊಂದ ಜೀವಗಳಿಗೆ ಸರಿಯಾಗಿ ಸ್ಪಂದಿಸುವ ಮೂಲಕ ಮಹಿಳಾ ಸ್ನೇಹಿ ಪೊಲೀಸ್ ಠಾಣೆಗಳು ಆಗುವಂತಹ ವ್ಯವಸ್ಥೆಯಾಗಬೇಕು ಎಂದರು.
ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗ ಅಲ್ಪ ಸಂಖ್ಯಾತರ ಮತ್ತು ಖಾಸಗಿ ಮಹಿಳಾ ವಸತಿ ನಿಲಯಯಗಳಲ್ಲಿ ಶಿಷ್ಠಾಚಾರದಂತೆ ಭದ್ರತೆ ಒದಗಿಸುವ ಕೆಲಸವನ್ನು ಕಡ್ಡಾಯವಾಗಿ ಮಾಡಬೇಕು. ಸುರಕ್ಷತೆ ಹಿತದೃಷ್ಟಿಯಿಂದ ಸಿಸಿ ಟಿವಿ ಇರುವುದು ಹಾಗೂ ವಾರ್ಡನ್‍ಗಳು ಮೊಬೈಲ್ ಆ್ಯಪ್ ಬಳಸುವ ಕಾರ್ಯವಾಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಚಂದ್ರಶೇಖರ ದಿಡ್ಡಿ, ಜಮಖಂಡಿ ಉಪ ವಿಭಾಗಾಧಿಕಾರಿ ಶ್ವೇತಾ ಬೀಡಿಕರ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಉಪನಿರ್ದೇಶಕ ಪ್ರಭಾಕರ ಇದ್ದರು.