ವಕ್ಫ್ ಆಸ್ತಿಗಳ ಒತ್ತುವರಿ: ತಿಂಗಳೊಳಗೆ ವರದಿ ನೀಡಲು ಸಚಿವ ಝಮೀರ್ ಅಹ್ಮದ್ ಸೂಚನೆ

Update: 2023-12-28 07:44 GMT

ಬೆಂಗಳೂರು, ಡಿ.28: ವಕ್ಫ್ ಆಸ್ತಿ ಒತ್ತುವರಿಗೆ ಸಂಬಂಧಿಸಿದಂತೆ ಪ್ರತೀ ಜಿಲ್ಲೆ ಹಾಗೂ ತಾಲೂಕುಗಳ ಸಮಗ್ರ ವರದಿ ಒಂದು ತಿಂಗಳಲ್ಲಿ ಸಲ್ಲಿಸುವಂತೆ ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ಝಮೀರ್ ಅಹ್ಮದ್ ಖಾನ್ ಗಡುವು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಅಲ್ಪಸಂಖ್ಯಾತರ ಕಲ್ಯಾಣ ನಿರ್ದೇಶನಾಲಯದಲ್ಲಿ ಜಿಲ್ಲಾ ವಕ್ಫ್ ಅಧಿಕಾರಿಗಳ ಸಭೆ ನಡೆಸಿದ ಸಚಿವರು, ಜಿಲ್ಲಾವಾರು ವಕ್ಫ್ ಆಸ್ತಿ ಗಳ ಸರಕಾರಿ ಒತ್ತುವರಿ, ಖಾಸಗಿ ಒತ್ತುವರಿ, ನ್ಯಾಯಾಲಯದಲ್ಲಿರುವ ಪ್ರಕರಣ ಸೇರಿ ಸಮಗ್ರ ಮಾಹಿತಿ ಜಿಲ್ಲಾ ಅಧಿಕಾರಿಗಳು ಸಲ್ಲಿಸಬೇಕು ಎಂದು ಸೂಚನೆ ನೀಡಿದರು.

ವಕ್ಫ್ ಆಸ್ತಿಗಳ ಒತ್ತುವರಿ ಬಗ್ಗೆ ಖಾಸಗಿ ಸಂಸ್ಥೆಯಿಂದಲೂ ಪ್ರತ್ಯೇಕ ಸಮೀಕ್ಷೆ ನಡೆಸಲಾಗುತ್ತಿದೆ. ಅಧಿಕಾರಿಗಳು ನೀಡುವ ವರದಿ, ಖಾಸಗಿ ಸಂಸ್ಥೆಯ ಮಾಹಿತಿ ತಾಳೆ ಆಗಬೇಕು. ಒಂದೊಮ್ಮೆ ತಾಳೆ ಆಗದಿದ್ದರೆ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜಿಲ್ಲೆಗಳಲ್ಲಿ ಕೆಲವು ಅಧಿಕಾರಿಗಳು ನ್ಯಾಯಾಲಯದಲ್ಲಿರುವ ಪ್ರಕರಣಗಳ ಬಗ್ಗೆ ಅಧ್ಯಯನ ನಡೆಸದೆ ನ್ಯಾಯಾಲಯಕ್ಕೆ ಹಾಜರಾಗದೆ ಪರೋಕ್ಷವಾಗಿ ಒತ್ತುವರಿದಾರರ ಜತೆ ಶಾಮೀಲಾಗಿರುವ ಮಾಹಿತಿ ಇದೆ. ವರ್ತನೆ ಸರಿ ಪಡಿಸಿಕೊಳ್ದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಮುಜರಾಯಿ ಹಾಗೂ ವಕ್ಫ್ ಇಲಾಖೆಯದು ದೇವರ ಕೆಲಸ. ಹಣ ಮಾಡಲು ಇಲ್ಲಿಗೆ ಬರಬಾರದು. ಆರೋಪ ಕೇಳಿ ಬಂದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ವಕ್ಫ್ ಅಸ್ತಿಗಳ ರಕ್ಷಣೆಗೆ ಕಾಂಪೌಂಡ್ ಗೋಡೆ ನಿರ್ಮಿಸಲು ಅಗತ್ಯ ಇರುವ ಕಡೆ ಪ್ರಸ್ತಾವ ಸಲ್ಲಿಸಿ. ವಕ್ಫ್ ಆಸ್ತಿ ಎಂದು ಗುರುತಿಸುವಂತಾಗಲು ಏಕ ರೂಪದ ಕಾಪೌಂಡ್ ಹಾಕಬೇಕು ಎಂದು ಸಚಿವರು ತಿಳಿಸಿದರು.

ಸಭೆಯಲ್ಲಿ ಇಲಾಖೆ ಕಾರ್ಯದರ್ಶಿ ಮನೋಜ್ ಜೈನ್, ವಕ್ಫ್ ಬೋರ್ಡ್ ಅಧ್ಯಕ್ಷ ಅನ್ವರ್ ಬಾಷಾ, ನಿರ್ದೇಶಕ ಮೊಕಾಶಿ ಜಿಲಾನಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News