ಭಾರತ ಶೇ.100ರಷ್ಟು ಸಾಕ್ಷರತೆ ಸಾಧಿಸಲು ಎಲ್ಲರೂ ಕೈಜೋಡಿಸಿ : ಶಂಕರ್ ಬಿದರಿ
ಬೆಂಗಳೂರು : ಭಾರತ ದೇಶವನ್ನು ಶೇ.100ರಷ್ಟು ಸಾಕ್ಷರ ರಾಷ್ಟ್ರವಾಗಿಸುವಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿ(ಸಿಎಸ್‍ಆರ್) ಕಾರ್ಯಕ್ರಮಗಳ ಮೂಲಕ ಸಕ್ರಿಯವಾಗಿ ಭಾಗವಹಿಸಬೇಕು ಎಂದು ನಿವೃತ್ತ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಇಂದಿಲ್ಲಿ ಕರೆ ನೀಡಿದ್ದಾರೆ.
ರವಿವಾರ ಇಲ್ಲಿನ ಇಂದಿರಾನಗರದಲ್ಲಿ ಕಾಗ್ನಿಟಿವ್ ಫ್ಯೂಷನ್ ಸಂಸ್ಥೆಯು ಆಯೋಜಿಸಿದ್ದ ವಾರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಇನ್ನೂ ಸಾಕಷ್ಟು ಜನರಿಗೆ ಓದು-ಬರಹ ಬಾರದೇ ಇರುವುದು ವಿಷಾದಕರ ಎಂದು ಬೇಸರ ವ್ಯಕ್ತಪಡಿಸಿದರು.
ತತ್ವಗಳು ಮತ್ತು ನೈತಿಕತೆಯ ತಳಹದಿಯಲ್ಲಿ ಸರಕಾರ ಮತ್ತು ಸಮಾಜ ನಡೆಯುತ್ತದೆ. ನಾವು ಅದಕ್ಕೆ ಬದ್ಧರಾಗಿರಬೇಕು. ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿ ಪಡೆದುಕೊಳ್ಳುವ ಕೌಶಲ್ಯ, ಜ್ಞಾನಕ್ಕೆ ಪೋಷಕರು ಸಾಕಷ್ಟು ಹಣ ವ್ಯಯಿಸುತ್ತಾರೆ. ಅದು ಸಮಾಜಕ್ಕೆ ಫಲಪ್ರದವಾಗಿ ಬಳಕೆಯಾಗಬೇಕು ಎಂದು ಶಂಕರ್ ಬಿದರಿ ತಿಳಿಸಿದರು.
ದೇಶದಲ್ಲಿ ಇಂದು 15 ಲಕ್ಷ ಎಂಜಿನಿಯರಿಂಗ್ ಪದವೀಧರರನ್ನು ತಯಾರು ಮಾಡುತ್ತಿದ್ದೇವೆ. ಅವರೆಲ್ಲರೂ ನಿರುದ್ಯೋಗಿಯಾಗಿ ಉಳಿದರೆ ಅವರು ಪಡೆದ ಕೌಶಲ್ಯ ವ್ಯರ್ಥವಾಗುತ್ತದೆ. ಆದ್ದರಿಂದ, ಪ್ರತಿವರ್ಷ ನಾವು ನಮ್ಮ ಇಂದಿನ ಅಗತ್ಯವನ್ನು ಮೌಲ್ಯಮಾಪನ ಮಾಡಬೇಕು. ದೇಶದಲ್ಲಿ ಮುಂದಿನ 5ರಿಂದ 10 ವರ್ಷಗಳ ಅಗತ್ಯವನ್ನು ಅಂದಾಜಿಸಬೇಕು ಮತ್ತು ಈ ವಿಷಯಗಳಲ್ಲಿ ನಾವು ಹೇಗೆ ತರಬೇತಿ ಮತ್ತು ಜ್ಞಾನ ನೀಡುತ್ತಿದ್ದೇವೆ ಎಂಬುದನ್ನು ಕಂಡುಕೊಳ್ಳಬೇಕು ಎಂದು ಶಂಕರ್ ಬಿದರಿ ಹೇಳಿದರು.
ನಮ್ಮ ದೇಶದ ಬ್ರಾಂಡ್ ಮೌಲ್ಯ ಹೆಚ್ಚಿಸದೇ ಇದ್ದಲ್ಲಿ ನಮ್ಮ ದೇಶದ ಪ್ರತಿಷ್ಠಯನ್ನು ಹೆಚ್ಚಿಸಲು ಸಾಧ್ಯವಿಲ್ಲ. ಪ್ರತಿ ಭಾರತೀಯರೂ ಅದಕ್ಕಾಗಿ ಕಂಕಣಬದ್ಧರಾಗಬೇಕು. ನಮ್ಮಲ್ಲಿ ಪ್ರತಿಯೊಬ್ಬರೂ ಪ್ರಾಮಾಣಿಕತೆ ಹೊಂದಿರಬೇಕು ಹಾಗೂ ಕಾನೂನುಗಳಿಗೆ ಬದ್ಧರಾಗಿರಬೇಕು ಎಂದು ಶಂಕರ್ ಬಿದರಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದ ಉದಯೋನ್ಮುಖ ಉದ್ಯಮಿಗಳಾದ ಐಶ್ವರ್ಯ ಡಿಕೆಎಸ್ ಹೆಗ್ಡೆ, ನಿತಿನ್ ಗಾರ್ಗ್ ಸಹಿತ 40 ಮಂದಿ ಸಾಧಕರನ್ನು ಸನ್ಮಾನಿಸಲಾಯಿತು.