ಬೆಂಗಳೂರಿನ ‘ರಾಮೇಶ್ವರಂ ಕೆಫೆ’ಯಲ್ಲಿ ಸ್ಫೋಟ: ಒಂಭತ್ತು ಮಂದಿಗೆ ಗಾಯ
ಬೆಂಗಳೂರು: ನಗರದ ಎಚ್‍ಎಎಲ್ ವ್ಯಾಪ್ತಿಯಲ್ಲಿರುವ ಬ್ರೂಕ್ ಫೀಲ್ಡ್ ಕುಂದಲನಹಳ್ಳಿ ಮುಖ್ಯರಸ್ತೆಯ ‘ದಿ ರಾಮೇಶ್ವರಂ ಕೆಫೆ’ಯಲ್ಲಿ ಗ್ರಾಹಕನೊಬ್ಬ ತಂದಿಟ್ಟಿದ್ದ ಚೀಲವೊಂದು ಸ್ಫೋಟವಾಗಿದ್ದು, ಇದರಲ್ಲಿ ಕಚ್ಚಾಬಾಂಬ್(ಐಇಡಿ) ಇರಬಹುದು ಎಂದು ಅನುಮಾನ ವ್ಯಕ್ತವಾಗಿದೆ. ಘಟನೆಯಲ್ಲಿ ಹೋಟೆಲ್ ಸಿಬ್ಬಂದಿ ಸೇರಿ ಒಂಭತ್ತು ಮಂದಿ ಗಾಯಗಳಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯಲ್ಲಿ ದಿ ರಾಮೇಶ್ವರಂ ಕೆಫೆ ಸಿಬ್ಬಂದಿ ಫಾರೂಕ್, ಗ್ರಾಹಕರಾದ ದೀಪಾಂಶು, ಸ್ವರ್ಣಾಂಬಾ, ಮೋಹನ್, ನಾಗಶ್ರೀ, ಮೋಮಿ, ಬಲರಾಮ್ ಕೃಷ್ಣನ್, ನವ್ಯಾ, ಶ್ರೀನಿವಾಸ್ ಗಾಯಗೊಂಡಿದ್ದಾರೆ. ಮಹಿಳೆ ಸ್ವರ್ಣಾಂಬಾ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ದೇಹದ ಶೇ.40ರಷ್ಟು ಸುಟ್ಟಿದೆ. ಮುಖ ಹಾಗೂ ಕಿವಿ ಭಾಗದಲ್ಲೂ ತೀವ್ರ ಗಾಯವಾಗಿದೆ. ಇವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಮೂಲಗಳು ತಿಳಿಸಿವೆ.
ಶುಕ್ರವಾರ ಮಧ್ಯಾಹ್ನ ಕೆಫೆಯಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಿತ್ತು. ಒಂದೇ ಕಂಪನಿಯ ಐವರು ಸಿಬ್ಬಂದಿ ಒಂದೇ ಸ್ಥಳದಲ್ಲಿ ಕುಳಿತು ಊಟ ಮಾಡುತ್ತಿದ್ದರು. ಇದೇ ಸಂದರ್ಭದಲ್ಲಿ 2 ಬಾರಿ ಸ್ಫೋಟ ಸಂಭವಿಸಿ, ದೊಡ್ಡ ಶಬ್ದ ಕೇಳಿಸಿತ್ತು. ಕೆಲ ಕ್ಷಣಗಳಲ್ಲಿ ಬೆಂಕಿ ಹೊತ್ತಿಕೊಂಡು ಉರಿದಿದೆ. ಗಾಯಾಳುಗಳನ್ನು ರಕ್ಷಿಸಿರುವ ಸ್ಥಳೀಯರು, ಆಟೊದಲ್ಲಿ ಆಸ್ಪತ್ರೆಗೆ ಕರೆದೊಯ್ದು ಸೇರಿಸಿದ್ದಾರೆ.
ಕಚ್ಚಾ ಬಾಂಬ್ ಶಂಕೆ?: ಘಟನೆಗೆ ಮೇಲ್ನೋಟಕ್ಕೆ ಬ್ಯಾಗ್‍ನಲ್ಲಿ ಕಚ್ಚಾ ಬಾಂಬ್ (ಐಇಡಿ) ಇದ್ದಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಅದರಲ್ಲೂ ಮಧ್ಯಾಹ್ನ 12.30ರ ಸುಮಾರಿಗೆ ಗ್ರಾಹಕನೊಬ್ಬ ಕ್ಯಾಷಿಯರ್ ಬಳಿ ಹೋಗಿದ್ದ. ಕ್ಯಾಷಿಯರ್ ಪಕ್ಕದಲ್ಲಿರು ಕಟ್ಟೆಯ ಮೇಲೆ ಬ್ಯಾಗ್ ಇರಿಸಿದ್ದ. ಇದಾದ, ಕೆಲ ನಿಮಿಷಗಳ ನಂತರ ಸ್ಫೋಟ ಸಂಭವಿಸಿರುವುದು ಗೊತ್ತಾಗಿದೆ. ಆದರೆ, ಬ್ಯಾಗ್‍ನಲ್ಲಿ ಇರುವುದು ಕಚ್ಚಾ ಬಾಂಬ್ ಇರಬಹುದೆಂಬ ಅನುಮಾನವಿದೆ. ಜತೆಗೆ, ಸ್ಫೋಟ ಸಂಭವಿಸಿದ್ದ ಸ್ಥಳದಲ್ಲಿ ಬಿಳಿ ಬಣ್ಣದ ಪೌಡರ್, ಬೋಲ್ಟ್, ನಟ್ ಹಾಗೂ ಬ್ಯಾಟರಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಇವುಗಳನ್ನು ನೋಡಿದರೆ ಟಫಿನ್ ಬಾಕ್ಸ್ ಅಥವಾ ಬೇರೆ ರೀತಿಯಲ್ಲಿ ಕಚ್ಚಾ ಬಾಂಬ್ ಸಿದ್ಧಪಡಿಸಿರುವ ಬಗ್ಗೆ ಅನುಮಾನವಿದೆ. ಆದರೆ, ಯಾವುದಕ್ಕೂ ಸದ್ಯ ಖಚಿತತೆ ಇಲ್ಲ. ವಿಧಿವಿಜ್ಞಾನ ಪ್ರಯೋಗಾಲಯ ತಜ್ಞರ ವರದಿಯಿಂದಲೇ ನಿಖರ ಮಾಹಿತಿ ತಿಳಿಯಲಿದೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆ ಸಂಬಂಧ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು, ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯ ತಜ್ಞರು, ಕೆಫೆ ಹಾಗೂ ಸುತ್ತಮುತ್ತ ಪರಿಶೀಲನೆ ನಡೆಸಿ ಕೆಲ ಮಾದರಿಗಳನ್ನು ಸಂಗ್ರಹಿಸಿದರು. ಈ ಪ್ರಕರಣ ಸಂಬಂಧ ಎಚ್‍ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಈ ಹಿಂದೆಯೂ ಅನುಮಾನಸ್ಪದ ಬ್ಯಾಗ್ ಪತ್ತೆಯಾಗಿದ್ದವು: ‘ಈ ಹಿಂದೆಯೂ ಎರಡು ಬಾರಿ ಅನುಮಾನಸ್ಪದ ಬ್ಯಾಗ್‍ಗಳು ಕೆಫೆಯಲ್ಲಿ ಪತ್ತೆಯಾಗಿದ್ದವು. ಈ ಬಗ್ಗೆ ಪೊಲೀಸರಿಗೂ ದೂರು ನೀಡಲಾಗಿತ್ತು ಎಂದು ದಿ ರಾಮೇಶ್ವರಂ ಕೆಫೆ ವ್ಯವಸ್ಥಾಪಕ ನಿರ್ದೇಶಕಿ(ಎಂ.ಡಿ) ಎಸ್.ದಿವ್ಯಾ ತಿಳಿಸಿದ್ದಾರೆ.
ಶುಕ್ರವಾರ ಘಟನೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆಯೂ ಎರಡು ಬಾರಿ ಅನುಮಾನಸ್ಪದ ಬ್ಯಾಗ್‍ಗಳು ಕೆಫೆಯಲ್ಲಿ ಪತ್ತೆಯಾಗಿದ್ದವು. ಈ ಬಗ್ಗೆ ಪೊಲೀಸರಿಗೂ ದೂರು ನೀಡಲಾಗಿತ್ತು. ಒಂದು ಬ್ಯಾಗ್‍ನ್ನು ಪೊಲೀಸರೇ ತೆಗೆದುಕೊಂಡು ಹೋಗಿದ್ದರು. ಇದಾದ ಕೆಲ ದಿನಗಳ ನಂತರ, ಇದೀಗ ಬ್ಯಾಗ್‍ನಿಂದಲೇ ಸ್ಫೋಟ ಸಂಭವಿಸಿದೆ ಎಂದರು.
10 ಸೆಕೆಂಡ್ ಅಂತರದಲ್ಲಿ ಎರಡು ಬಾರಿ ಸ್ಫೋಟ ಸಂಭವಿಸಿದ್ದು, ಇದು ಹೊರಗಿನವರ ದುಷ್ಕೃತ್ಯ. ಅಲ್ಲದೆ, ವಿದ್ಯುತ್ ಅವಘಡ ಹಾಗೂ ಅಡುಗೆ ಅನಿಲ ಸೋರಿಕೆಯಿಂದ ಸ್ಫೋಟ ಸಂಭವಿಸಿಲ್ಲ. ಹೊರಗಡೆಯಿಂದ ತಂದಿಟ್ಟಿದ್ದ ಬ್ಯಾಗ್‍ನಿಂದ ಸ್ಫೋಟ ಸಂಭವಿಸಿದೆ. ಅದರಲ್ಲೂ, ಗ್ರಾಹಕರು ತಟ್ಟೆಯನ್ನು ಇರಿಸಲು ಹಾಗೂ ಕೈ ತೊಳೆಯಲು ವ್ಯವಸ್ಥೆ ಮಾಡಲಾಗಿದೆ. ಇದೇ ಸ್ಥಳದಲ್ಲಿ ಮಧ್ಯಾಹ್ನ 12.55ಕ್ಕೆ ಸ್ಫೋಟ ಸಂಭವಿಸಿದೆ ಎಂದು ಹೇಳಿದರು.
ತನಿಖಾ ಸಂಸ್ಥೆಗಳಿಗೆ ಸ್ಫೋಟದ ಮಾಹಿತಿ: ‘ರಾಮೇಶ್ವರಂ ಕೆಫೆಯಲ್ಲಿ ಶುಕ್ರವಾರ ಮಧ್ಯಾಹ್ನ ಬಾಂಬ್ ಸ್ಫೋಟಗೊಂಡಿದ್ದು, ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ರಾಷ್ಟ್ರೀಯ ತನಿಖಾ ಸಂಸ್ಥೆ, ಗುಪ್ತಚರ ದಳ ಸೇರಿದಂತೆ ಎಲ್ಲ ತನಿಖಾ ಸಂಸ್ಥೆಗಳಿಗೆ ಮಾಹಿತಿ ತಲುಪಿಸಲಾಗಿದೆ. ಘಟನೆ ನಡೆದ ಸ್ಥಳದಲ್ಲಿ ವಿಧಿವಿಜ್ಞಾನ ತಂಡದ ತಜ್ಞರು ಪರಿಶೀಲನೆ ನಡೆಸಿದ್ದು, ಬಾಂಬ್ ಸ್ಫೋಟಕ್ಕೆ ಏನನ್ನು ಬಳಸಲಾಗಿದೆ ಎಂಬುದು ನಂತರ ತಿಳಿದು ಬರಲಿದೆ. ಸ್ಪೋಟದಲ್ಲಿ ಒಟ್ಟು 9 ಮಂದಿ ಗಾಯಗೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ’
ಅಲೋಕ್ ಮೋಹನ್ ರಾಜ್ಯ ಪೊಲೀಸ್ ಮಹಾ ನಿರ್ದೇಶಕ