ಸುದ್ದಗುಂಟೆಪಾಳ್ಯ‌ ಘಟನೆಗೆ ಸಂಬಂಧಿಸಿದಂತೆ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ : ಜಿ.ಪರಮೇಶ್ವರ್‌

Update: 2025-04-08 12:42 IST
ಸುದ್ದಗುಂಟೆಪಾಳ್ಯ‌ ಘಟನೆಗೆ ಸಂಬಂಧಿಸಿದಂತೆ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ : ಜಿ.ಪರಮೇಶ್ವರ್‌
  • whatsapp icon

ಬೆಂಗಳೂರು: ಸುದ್ದೆಗುಂಟೆ ಪಾಳ್ಯದಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆಗೆ ಸಂಬಂಧಿಸಿದಂತೆ ನಾನು ನೀಡಿದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ನಾನು ಎಂದಿಗೂ ಮಹಿಳೆಯರ ರಕ್ಷಣೆಗೆ ಹೆಚ್ಚು ಒತ್ತು ನೀಡಿದ್ದೇನೆ ಎಂದು ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್‌ ಅವರು ಸ್ಪಷ್ಟನೆ ನೀಡಿದರು.

ಸುದ್ದೆಗುಂಟೆ ಪಾಳ್ಯದಲ್ಲಿ ಯುವತಿಗೆ ಲೈಂಗಿಕ ಕಿರುಕುಳ ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದ್ದು, ಇಷ್ಟುದೊಡ್ಡನಗರಗಳಲ್ಲಿ ಅಲ್ಲೊಂದು ಇಲ್ಲೊಂದು ಇಂತಹ ಘಟನೆ ನಡೆಯುತ್ತವೆ ಎಂದು ಹೇಳಿಕೆ ನೀಡಿದ್ದರು. ಈ ಸಂಬಂಧ ಪ್ರಕ್ರಿಯಿಸಿದ ಅವರು, ರಾಜ್ಯದಲ್ಲಿ ನಿರ್ಭಯಾ ಯೋಜನೆ ಸೇರಿದಂತೆ ಮಹಿಳಾ ಸುರಕ್ಷತೆಗೆ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದೇನೆ. ದೇಶದಲ್ಲಿ ಬೇರೆ ರಾಜ್ಯಗಳಿಗಿಂತ ನಿರ್ಭಯಾ ಯೋಜನೆಯ ಅನುದಾನವನ್ನು ಹೆಚ್ಚು ಬಳಸಿಕೊಂಡು, ಅನುಷ್ಟಾನ ಮಾಡಿದ್ದೇವೆ. ನಾನು ಪ್ರತಿ ಬಾರಿ ಗೃಹ ಸಚಿವನಾದಾಗ ಬೆಂಗಳೂರು ನಗರ ಸೇರಿದಂತೆ ರಾಜ್ಯದಾದ್ಯಂತ ಮಹಿಳಾ ಸುರಕ್ಷತೆಗೆ ಏನೆಲ್ಲ ಕ್ರಮ ಕೈಗೊಂಡಿದ್ದೇನೆ ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ ಎಂದು ಅವರು ಹೇಳಿದರು

ಒಂದು ಹೇಳಿಕೆಯನ್ನು ತಿರುಚಿ, ನನ್ನ ಬಗ್ಗೆ ಅವಹೇಳನ ಮಾಡುವುದು ಸರಿಯಲ್ಲ. ನಾನು ಮಹಿಳೆಯರ ರಕ್ಷಣೆಗೆ ಅನೇಕ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದೇನೆ. ಮಹಿಳೆಯರ ರಕ್ಷಣೆ ಆಗಬೇಕು ಎನ್ನುವ ನಂಬಿಕೆಯಲ್ಲಿದ್ದೇನೆ. ಯಾರಿಗೆ ತೊಂದರೆ ಆದರೂ ಸಹ ನಮ್ಮ ಇಲಾಖೆಯಲ್ಲಿ ನೇರವಾಗಿ ಅನೇಕರನ್ನು ಹೊಣೆ ಮಾಡಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಬಿಜೆಪಿಯವರ ರಾಜಕೀಯ ಹೊರತುಪಡಿಸಿ, ಒಂದು ವೇಳೆ ನಾಡಿನ ತಾಯಂದಿರ ಮನಸ್ಸಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ. ನನ್ನ ಹೇಳಿಕೆಯನ್ನು ಬೇರೆಬೇರೆ ರೂಪಕ್ಕೆ ತೆಗೆದುಕೊಂಡು ಹೋಗಬೇಕಿಲ್ಲ‌ ಎಂದು ಹೇಳಿದರು.

ಪ್ರತಿನಿತ್ಯ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ಕಾನೂನು ಸುವ್ಯವಸ್ಥೆ ಎಡಿಜಿಪಿಯವರು ಇಲಾಖೆಯ ದೈನಂದಿನ ಮಾಹಿತಿಯನ್ನು ನೀಡಲು ಬಂದಾಗ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ಕಟ್ಟುನಿಟ್ಟಿನ ಕ್ರಮ ವಹಿಸುವಂತೆ ಸೂಚಿಸುತ್ತೇನೆ. ಜಿಲ್ಲಾ‌ ಪೊಲೀಸ್ ಪ್ರಗತಿ ಪರಿಶೀಲನೆ ಕೈಗೊಂಡಾಗಲೂ ಇದೇ ವಿಚಾರವನ್ನು ಪ್ರಸ್ತಾಪಿಸುತ್ತೇನೆ ಎಂದು ತಿಳಿಸಿದರು.

ಬಿಜೆಪಿಯವರ ಆಡಳಿತದ ಅವಧಿಯಲ್ಲಿ ರಾಜ್ಯದಲ್ಲಿ ಏನೆಲ್ಲ ಆಗಿತ್ತು ಎಂಬುದನ್ನು ಅಂಕಿ ಅಂಶ ಸಮೇತ ಸದನದಲ್ಲಿ ಉತ್ತರಿಸಿದ್ದೇನೆ. ಬಿಜೆಪಿಯವರು ತಮ್ಮ ಅಧಿಕಾರಾವಧಿಯಲ್ಲಿ ಏನೂ ಆಗಿರಲಿಲ್ಲ. ಎಲ್ಲವೂ ಚೆನ್ನಾಗಿತ್ತು ಅಂತ ಹೇಳುವುದಕ್ಕೆ ಜನ ನಗಾಡುತ್ತಾರೆ ಎಂದು ಪ್ರತಿಕ್ರಿಯಿಸಿದರು.

ಬಿಜೆಪಿಯವರು ಉತ್ತರಿಸಬೇಕು : ಕೇಂದ್ರ ಸರ್ಕಾರ ಅಡುಗೆ ಸಿಲಿಂಡರ್ ಬೆಲೆ 50 ರೂ. ಪೆಟ್ರೋಲ್, ಡೀಸೆಲ್ ಬೆಲೆ 2 ರೂ. ಹೆಚ್ಚಳ ಮಾಡಿದೆ. ಇದಕ್ಕೆ ಮೊದಲು ಬಿಜೆಪಿಯವರು ಉತ್ತರಿಸಬೇಕು. ರಾಜ್ಯದಲ್ಲಿ ಜನತೆ ಗಮನಿಸುತ್ತಾರೆ ಎಂದು ನಿನ್ನೆಯೇ ಹೇಳಿದ್ದೆ. ಬಿಜೆಪಿಯವರು ಜನಾಕ್ರೋಶ ಅಂತ ಹೇಳಿದ್ದರು. ಬಿಜೆಪಿ ಆಕ್ರೋಶ ಎಂದು ನಾನು ಹೇಳಿದ್ದೆ. ಆಕ್ರೋಶ ಮಾಡಲು ಹೊರಟಿರುವ ಬಿಜೆಪಿಯವರು ಈಗ ಉತ್ತರ ಕೊಡಬೇಕು ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News