ಚಂದ್ರಶೇಖರ ಸ್ವಾಮೀಜಿ ವಿರುದ್ಧ ಎಫ್.ಐ.ಆರ್. | ಕಾನೂನಿನ ಚೌಕಟ್ಟಿನೊಳಗೆ ಬಂದರೆ ಕ್ರಮ: ಸಿದ್ದರಾಮಯ್ಯ

Update: 2024-12-01 10:07 GMT

ಬೆಂಗಳೂರು, ಡಿ.1: ಚಂದ್ರಶೇಖರ ಸ್ವಾಮೀಜಿ ಅವರ ಪ್ರಕರಣದಲ್ಲಿ ಪೊಲೀಸರು ಕಾನೂನಿನ ದೃಷ್ಟಿಯಲ್ಲಿ ಏನು ಮಾಡಬೇಕೋ ಅದನ್ನು ಮಾಡುತ್ತಾರೆ. ಕಾನೂನಿನ ಚೌಕಟ್ಟಿನೊಳಗೆ ಬಂದರೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಇಲ್ಲವಾದರೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಅವರು ಇಂದು ಕೆಂಗಲ್ ಹನುಮಂತಯ್ಯ ಅವರ ಸಂಸ್ಮರಣೆಯ ಪ್ರಯುಕ್ತ ಅವರ ಪ್ರತಿಮೆಗೆ ಮಾಪಾರ್ಪಣೆ ಮಾಡಿದ ಬಳಿಕ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.

ಜೆಡಿಎಸ್ ಬಿಟ್ಟದ್ದಲ್ಲ, ಉಚ್ಚಾಟಿಸಿದ್ದು

ಜೆ ಡಿ ಎಸ್ ಬಿಡುವಾಗ ಮಾಡಿದ್ದ ನಾಟಕವನ್ನೇ ಈಗ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಜೆಡಿಎಸ್ ನಿಂದ ನನ್ನನ್ನು ಉಚ್ಚಾಟಿಸಲಾಗಿತ್ತು. ನಾನು ಬಿಡಲಿಲ್ಲ ಎಂದರು.

ರಾಜ್ಯದ ಜನರಿಗೆ ಕೃತಜ್ಞತೆ ಹೇಳಲು ಸಮಾವೇಶ

ನಾನು ಪಕ್ಷವನ್ನು ಬಿಡಲಿಲ್ಲ. ನನ್ನನ್ನು ದೇವೇಗೌಡರು ಉಚ್ಚಾಟಿಸಿದರು. ನಂತರ ನಾನು ಬೇರೆ ದಾರಿ ಇಲ್ಲದೆ ಅಹಿಂದ ಸಮಾವೇಶ ನಡೆಸಿದೆ, ಹಾಸನದಲ್ಲಿಯೂ ಸಮಾವೇಶ ಮಾಡಿದ್ದೆ. ಈಗ ಇಡೀ ರಾಜ್ಯದ ಜನರಿಗೆ ಕೃತಜ್ಞತೆ ಹೇಳಲು ಕಾಂಗ್ರೆಸ್ ಪಕ್ಷ ಮತ್ತು ಸ್ವಾಭಿಮಾನಿಗಳ ಒಕ್ಕೂಟದಿಂದ ಸಮಾವೇಶ ಏರ್ಪಡಿಸಲಾಗಿದೆ. ಕಾಂಗ್ರೆಸ್ ಪಕ್ಷ ಮತ್ತು ಸ್ವಾಭಿಮಾನಿಗಳ ಜಂಟಿ ಆಶ್ರಯದಲ್ಲಿ ನಡೆಯುತ್ತಿದೆ ಎಂದು ತಿಳಿಸಿದರು.

ಇದಕ್ಕೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನೂ ಆಹ್ವಾನಿಸಲಾಗಿದೆ. ಪಕ್ಷವು ಇದರಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದೆ ಎಂದರು.

ಜೆಡಿಎಸ್ ಈಗ ಜಾತ್ಯತೀತವಾಗಿ ಉಳಿದಿದೆಯೇ?

ಜೆಡಿಎಸ್ ಪಕ್ಷ ವನ್ನು ಕಟ್ಟಿದವರು ನಾವು. ಜೆಡಿಎಸ್ ಈಗ ಜಾತ್ಯತೀತವಾಗಿ ಉಳಿದಿದೆಯೇ ? ಎಂದು ಮುಖ್ಯಮಂತ್ರಿ ಪ್ರಶ್ನಿಸಿದರು. ಕೋಮುವಾದಿಗಳ ಜೊತೆಗೆ ಸೇರಿದ ಮೇಲೆ ಯಾವ ಸೆಕ್ಯುಲರ್ ಆಗಿದೆ ? ಸಂವಿಧಾನದಲ್ಲಿ ಜಾತ್ಯತೀತ, ಸಮಾಜವಾದಿ ಎಂದು ಸೇರ್ಪಡೆಯಾಗಿದೆ. ಸರ್ವೋಚ್ಚ ನ್ಯಾಯಾಲಯವೂ ಜಾತ್ಯತೀತ ಇರಲೇಬೇಕೆಂದು ಹೇಳಿದ್ದಾರೆ. ಜೆಡಿಎಸ್ ನವರಿಗೆ ಪಕ್ಷ ಯಾವ ಹಿನ್ನೆಲೆಯಲ್ಲಿ ಕಟ್ಟಲಾಗಿದೆ ಎಂದು ಗೊತ್ತಿಲ್ಲ. ಪಕ್ಷ ರಚನೆಗೊಂಡಾಗ ಕುಮಾರಸ್ವಾಮಿ ಇರಲಿಲ್ಲ . ನಾನು ದೇವೇಗೌಡ, ಇಬ್ರಾಹೀಂ, ಸತೀಶ್ ಜಾರಕಿಹೊಳಿ, ಮಹದೇವಪ್ಪ, ವೆಂಕಟೇಶ್, ಲಕ್ಷ್ಮೀ ಸಾಗರ್ ಸೇರಿ ಆಗಿದ್ದು. ದೇವೇಗೌಡರು ರಾಷ್ಟ್ರೀಯ ಅಧ್ಯಕ್ಷರಾದರು, ನಾನು ರಾಜ್ಯಾಧ್ಯಕ್ಷನಾದೆ ಎಂದು ಸಿದ್ದರಾಮಯ್ಯ ವಿವರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News