ಬಿಬಿಸಿಯಲ್ಲಿ ಅಗ್ನಿ ಅವಘಡ : ಸಂತ್ರಸ್ತರೊಂದಿಗೆ ಸಚಿವ ಪ್ರಿಯಾಂಕ್ ಖರ್ಗೆ ಸಭೆ

Update: 2025-01-15 16:45 GMT

ಬೆಂಗಳೂರು : ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಇಲಾಖೆಯ ಅಧೀನದಲ್ಲಿರುವ ಬೆಂಗಳೂರು ಬಯೋ ಇನೋವೇಷನ್ ಸೆಂಟರ್ (ಬಿಬಿಸಿ)ನಲ್ಲಿ ಸಂಭವಿಸಿದ ಅಗ್ನಿ ಅವಘಡದಿಂದಾಗಿ ಸಂತ್ರಸ್ತರಾಗಿರುವ ಸ್ಟಾರ್ಟ್‍ಪ್ ಸಂಸ್ಥೆಗಳ ಪ್ರತಿನಿಧಿಗಳ ಸಭೆಯನ್ನು ನಡೆಸಿದ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ, ಸರಕಾರದಿಂದ ನೀಡಬಹುದಾದ ನೆರವು ಹಾಗೂ ಪರಿಹಾರದ ಬಗ್ಗೆ ಪರಿಶೀಲಿಸುವ ಭರವಸೆ ನೀಡಿದರು.

ಅವಘಡದಲ್ಲಿ ಮೌಲ್ಯಯುತ ವಸ್ತುಗಳು ಸುಟ್ಟು ಭಸ್ಮವಾಗಿವೆ, ಕಂಪ್ಯೂಟರ್‍ಗಳಲ್ಲಿ ಸಂಗ್ರಹಿಸಿದ ಮಾಹಿತಿ, ಸಂಶೋಧನೆಗಳು ಹಾಳಾಗಿವೆ ಸ್ಟಾರ್ಟ್‍ಪ್‍ಗಳನ್ನು ಹಿಂದಿನ ಸ್ಥಿತಿಗೆ ತೆಗೆದುಕೊಂಡು ಹೋಗಲು ಹೆಚ್ಚಿನ ಶ್ರಮವಹಿಸಬೇಕಾಗುತ್ತದೆ ಎಂದು ತಿಳಿಸಿದ ಅವರು, ಸಿ.ಎಸ್.ಆರ್ ನಿಧಿ ಸೇರಿದಂತೆ ಸಂತ್ರಸ್ತರಿಗೆ ಪರಿಹಾರ ನೀಡಲು ಮಾರ್ಗೋಪಾಯಗಳನ್ನು ಯೋಚಿಸುವುದಾಗಿ ತಿಳಿಸಿದರು.

ನೆಲಮಹಡಿ ಸೇರಿ ನಾಲ್ಕು ಅಂತಸ್ತಿನ ಕಟ್ಟಡದ 2ನೇ ಮಹಡಿಯಲ್ಲಿ ಬಿಬಿಸಿ ಕಾರ್ಯ ನಿರ್ವಹಿಸುತ್ತಿದ್ದು, ಮಂಗಳವಾರ ಬೆಳಗ್ಗೆ 5 ಗಂಟೆಗೆ ಸೆಂಟರ್‍ನ ಪ್ರಯೋಗಾಲಯದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬಿಬಿಸಿಯ ಸೆಂಟರ್‍ನಲ್ಲಿ ಸುಮಾರು 12 ಸಂಶೋಧನಾ ಪ್ರಯೋಗಾಲಯಗಳಿದ್ದು, ಇಲ್ಲಿ ಜೀವ ವಿಜ್ಞಾನ, ಆರೋಗ್ಯ, ಔಷಧಿ, ಜೈವಿಕ ಔಷಧಿ, ಕೃಷಿ, ಆಹಾರ, ಕೈಗಾರಿಕಾ ಜೈವಿಕ ತಂತ್ರಜ್ಞಾನ, ಜೈವಿಕ ಪರಿಸರ ತಂತ್ರಜ್ಞಾನ ಸೇರಿ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಸಂಶೋಧನೆಗಳು ನಡೆಯುತ್ತಿದ್ದವು ಎಂಬ ಸಂಗತಿಯನ್ನು ಸಚಿವರಿಗೆ ತಿಳಿಸಿದ ಸ್ಟಾರ್ಟ್‍ಪ್‍ಗಳ ಪ್ರತಿನಿಧಿಗಳು ಪರಿಹಾರ ಒದಗಿಸುವಂತೆ ಮನವಿ ಮಾಡಿದರು.

ಸಭೆಯಲ್ಲಿ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ.ಏಕರೂಪ್ ಕೌರ್ ಹಾಗೂ ನಿರ್ದೇಶಕ ದರ್ಶನ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News