ನಕಲಿ ಜಿಪಿಎ ತಯಾರಿಸಿ ಕೋಟ್ಯಂತರ ರೂ.ಮೌಲ್ಯದ ಆಸ್ತಿ ಲಪಟಾಯಿಸಲು ಯತ್ನ; ಪಾಲಿಕೆ ಮಾಜಿ ಸದಸ್ಯ ಸೇರಿದಂತೆ ಆರು ಮಂದಿಯ ನಿರೀಕ್ಷಣಾ ಜಾಮೀನು ಅರ್ಜಿ ವಜಾ
ಬೆಂಗಳೂರು : ನಕಲಿ ಜಿಪಿಎ ತಯಾರಿಸಿಕೊಂಡು ಕೋಟ್ಯಂತ ರೂ.ಮೌಲ್ಯದ ಆಸ್ತಿ ಲಪಟಾಯಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ಕೋರಿ ಪಾಲಿಕೆ ಮಾಜಿ ಸದಸ್ಯ ಕೆ.ಎಸ್.ಸಮೀಉಲ್ಲಾ ಸೇರಿದಂತೆ ಆರು ಮಂದಿ ಸಲ್ಲಿಸಿದ್ದ ಅರ್ಜಿಯನ್ನು ನಗರದ 69ನೆ ಹೆಚ್ಚುವರಿ ಸಿಟಿ ಸಿವಿಲ್ ಹಾಗೂ ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿದೆ.
ಬೆಂಗಳೂರಿನಲ್ಲಿ ರೇಷ್ಮೆ, ರಿಯಲ್ ಎಸ್ಟೇಟ್ ಹಾಗೂ ದುಬೈನಲ್ಲಿ ವ್ಯವಹಾರ ನಡೆಸುತ್ತಿದ್ದ ಸೈಯದ್ ಮುಸ್ತಫಾ 2004ರಲ್ಲಿ ರಸ್ತೆ ಅಪಘಾತಕ್ಕೀಡಾಗಿದ್ದರು. ಬಳಿಕ ಅವರ ಸಹೋದರಿ ಕೆ.ಎಸ್.ಗುಲಾಬ್ ಜಾನ್, ಆಕೆಯ ಗಂಡ ಕೆ.ಎಸ್.ಸಮೀವುಲ್ಲಾ, ಸೈಯದ್ ಮುಸ್ತಫಾ ಅವರ ಆರೋಗ್ಯವನ್ನು ನೋಡಿಕೊಂಡಿದ್ದರು.
ಸೈಯದ್ ಮುಸ್ತಫಾ ಅವರಿಗೆ ಸೇರಿದ ಬೇಗೂರಿನಲ್ಲಿರುವ ಕೋಟ್ಯಂತರ ರೂ. ಬೆಲೆ ಬಾಳುವ ನಿವೇಶನ ಸಂಖ್ಯೆ 335/1ರಲ್ಲಿರುವ ಎರಡು ಎಕರೆ ಎಂಟು ಗುಂಟೆ ಹಾಗೂ 335/8ರಲ್ಲಿರುವ 35 ಗುಂಟೆ ಆಸ್ತಿಗೆ 2020ರ ಫೆ.13ರಂದು ಗುಲಾಬ್ ಜಾನ್, ಸಮೀವುಲ್ಲಾ, ಅವರ ಮಕ್ಕಳಾದ ಸುನಾ ಮಿಯಾಂದಾದ್, ಸಲ್ಮಾನ್, ಶಬ್ನಮ್ ಸೇರಿಕೊಂಡು, ಅವರ ಮನೆಯ ಕಾರು ಚಾಲಕ ಅಮ್ಜದ್ ಖಾನ್ ಹಾಗೂ ಇತರರ ಹೆಸರಿನಲ್ಲಿ ನಕಲಿ ಜಿಪಿಎ ರಚಿಸಿ, ತಮ್ಮ ಹೆಸರಿಗೆ ನೋಂದಣಿ ಮಾಡಿಸಿಕೊಂಡಿದ್ದರು.
ಈ ವಿಷಯ ಸೈಯದ್ ಮುಸ್ತಫಾ ಗಮನಕ್ಕೆ ಬಂದು, ತನ್ನ ಆಸ್ತಿಯನ್ನು ತನಗೆ ವಾಪಸ್ ನೀಡುವಂತೆ ಕೇಳಿದಾಗ, ಸಮೀಉಲ್ಲಾ ಸೇರಿದಂತೆ ಎಲ್ಲ ಆರೋಪಿಗಳು ಅವರನ್ನು ಮನೆಯಿಂದ ಹೊರ ಹಾಕಿ ಪ್ರಾಣ ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ಸೈಯದ್ ಮುಸ್ತಫಾ ಹುಳಿಮಾವು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ನಗರದ 69ನೇ ಹೆಚ್ಚುವರಿ ಸಿಟಿ ಸಿವಿಲ್ ಹಾಗೂ ಸೆಷನ್ಸ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ನ್ಯಾಯಾಲಯವು ಆರೋಪಿಗಳ ಅರ್ಜಿಯನ್ನು ವಜಾಗೊಳಿಸಿದೆ. ಇದರ ಎಲ್ಲ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.