ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರು ಅಪಘಾತ ಪ್ರಕರಣ : ಅನಾಮಿಕ ಕಂಟೇನರ್ ಟ್ರಕ್‍ಗಾಗಿ ಪೊಲೀಸರ ಶೋಧ

Update: 2025-01-15 15:53 GMT

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರು ಅಪಘಾತ

ಬೆಂಗಳೂರು : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರು ಅಪಘಾತ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಅಪಘಾತಕ್ಕೆ ಕಂಟೇನರ್ ಟ್ರಕ್ ವಾಹನ ಕಾರಣವೆಂಬ ಮಾಹಿತಿ ಗೊತ್ತಾಗಿದೆ. ಈ ಕುರಿತು ಚಾಲಕನ ಹೇಳಿಕೆ ದಾಖಲಿಸಿಕೊಂಡಿರುವ ಪೊಲೀಸರು, ಟ್ರಕ್ ಚಾಲಕನ ಶೋಧಕ್ಕೆ ಕಾರ್ಯಾಚರಣೆ ಕೈಗೊಂಡಿದ್ದಾರೆ.

ನಿನ್ನೆ ಬೆಳಗ್ಗೆ 5 ಗಂಟೆಗೆ ಇಲ್ಲಿನ ಅಂಬಡಗಟ್ಟಿ ಕ್ರಾಸ್ ಬಳಿ ಒಂದು ಕಂಟೇನರ್ ಟ್ರಕ್‌ವೊಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್  ಕಾರಿನ ಬಲಭಾಗಕ್ಕೆ ತಾಗಿದೆ. ಅದರಿಂದ ಮುಂದೆ ಆಗಲಿದ್ದ ಹೆಚ್ಚಿನ ಅನಾಹುತ ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ, ಸರ್ವೀಸ್ ರಸ್ತೆಗಿಳಿದು ಕಾರು ಮರಕ್ಕೆ ಗುದ್ದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.

ಈ ದೂರಿನ್ವಯ ಪೊಲೀಸರು ಹಿಟ್ ಅಂಡ್ ರನ್ ಪ್ರಕರಣ ಎಂದು ಪರಿಗಣಿಸಿದ್ದು, ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ಅದರಲ್ಲೂ, ಅಪಘಾತಕ್ಕೆ ಕಾರಣವಾದ  ವಾಹನಕ್ಕೆ ಬಲೆ ಬೀಸಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ಮಾಹಿತಿ ನೀಡಿದ್ದಾರೆ.

ಇನ್ನೂ ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಮಾತನಾಡಿ, ವಾಹನವನ್ನು ಪಂಚನಾಮೆ ನಡೆಸಲು ಪೊಲೀಸರು ಸ್ಥಳಕ್ಕೆ ತೆರಳಿದಾಗ ಅಲ್ಲಿ ಕಾರು ಇರಲಿಲ್ಲ. ಸಚಿವರ ಕಡೆಯವರು ಆ ಕಾರನ್ನು ಟೊಯೋಟಾ ಶೋರೂಂಗೆ ಸಾಗಿಸಿದ್ದರು. ಅಲ್ಲಿಯೇ ಹೋಗಿ ನಮ್ಮ ಪೊಲೀಸರು ಪಂಚನಾಮೆ ಮಾಡಿದ್ದಾರೆ. ಕಾರಿನ ಬಲಬದಿಗೆ ಗುದ್ದಿರುವ ನಿಶಾನೆಗಳು ಸಿಕ್ಕಿವೆ. ಕಾರಿಗೆ ತಾಗಿದ ವಾಹನದ ಶೋಧಕಾರ್ಯ ಮುಂದುವರಿಸಿದ್ದೇವೆ ಎಂದು ತಿಳಿಸಿದರು.

ಸಚಿವರ ಜೊತೆಗೆ ಬೆಂಗಾವಲು ವಾಹನ ಇರಲಿಲ್ಲ. ಅಲ್ಲದೇ ಸಚಿವ ಬರುವ ಕುರಿತು ನಮಗೂ ಮಾಹಿತಿ ನೀಡಿರಲಿಲ್ಲ. ಬೇರೆ ವಾಹನಗಳು ಓಡಾಡಲು ಸಮಸ್ಯೆ ಆಗಬಾರದು. ಅದೇ ರೀತಿ ಮತ್ತೆ ಬೇರೆ ಅಪಘಾತಗಳು ಸಂಭವಿಸಬಾರದು ಎಂಬ ಉದ್ದೇಶದಿಂದ ಆ ಕಾರನ್ನು ಅಲ್ಲಿಂದ ಅವರೇ ಸಾಗಿಸಿದ್ದಾರೆ. ಅಲ್ಲದೇ ಮೊದಲು ಸಚಿವರು ಸೇರಿದಂತೆ ನಾಲ್ವರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ ಬಳಿಕವೇ ಆ ಕಾರನ್ನು ಸ್ಥಳಾಂತರಿಸಲಾಗಿದೆ. ಹಾಗಾಗಿ, ಕೂಲಂಕುಶವಾಗಿ ತನಿಖೆ ನಡೆಸಿ ವಸ್ತುಸ್ಥಿತಿ ವರದಿಯನ್ನು ನಾವು ಸರಕಾರಕ್ಕೆ ಸಲ್ಲಿಸುತ್ತೇವೆ ಎಂದೂ ಅವರು ಮಾಹಿತಿ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News