ವಂಚನೆ ಪ್ರಕರಣ : ಆರೋಪಿ ಐಶ್ವರ್ಯಾ ಗೌಡ ವಿರುದ್ಧ ಡಿ.ಕೆ.ಸುರೇಶ್ ದೂರು

Update: 2024-12-30 14:25 GMT

ಡಿ.ಕೆ.ಸುರೇಶ್

ಬೆಂಗಳೂರು : ತಮ್ಮ ಸಹೋದರಿ ಎಂದು ಹೇಳಿಕೊಂಡು ಹಲವಾರು ಜನರಿಗೆ ಚಿನ್ನಾಭರಣ ಹಾಗೂ ಹಣ ವಂಚನೆ ಮಾಡುತ್ತಿರುವ ಆರೋಪಿ ಐಶ್ವರ್ಯಾ ಗೌಡ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮಾಜಿ ಸಂಸದ ಡಿ.ಕೆ.ಸುರೇಶ್ ಅವರು ನಗರ ಪೊಲೀಸ್ ಆಯುಕ್ತರಿಗೆ ಸೋಮವಾರ ದೂರು ನೀಡಿದ್ದಾರೆ.

ಐಶ್ವರ್ಯಾ ಗೌಡ ಯಾನೆ ನವ್ಯಶ್ರೀ ಎಂಬುವವರು ನನ್ನ ಹೆಸರನ್ನು ದುರುಪಯೋಗಪಡಿಸಿಕೊಂಡು ಜನರಿಗೆ ವಂಚನೆ ಮಾಡುತ್ತಿರುವುದು ಮಾಧ್ಯಮಗಳಲ್ಲಿ ಕೆಲವು ದಿನಗಳಿಂದ ವರದಿಯಾಗುತ್ತಿದೆ. ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಮಾಡಲು ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಡಿ.ಕೆ.ಸುರೇಶ್ ದೂರಿನಲ್ಲಿ ಒತ್ತಾಯಿಸಿದ್ದಾರೆ.

ನನ್ನ ಸಾರ್ವಜನಿಕ ಜೀವನವನ್ನು, ಜನಸೇವೆಯ ಕಾರ್ಯವನ್ನು ದುರುಪಯೋಗಪಡಿಸಿಕೊಳ್ಳುವವರಿಗೆ ಇದೊಂದು ಪಾಠವಾಗಲಿ. ಯಾವುದೇ ಕಾರಣಕ್ಕೂ ನನ್ನ ಹೆಸರನ್ನು ಹೇಳಿಕೊಂಡು ಲಾಭ ಪಡೆದುಕೊಳ್ಳಲು ಪ್ರಯತ್ನಿಸಿದರೆ ಮೋಸ ಹೋಗಬೇಡಿ ಎಂದು ಸಾರ್ವಜನಿಕರಿಗೆ ಮನವಿ ಮಾಡಿಕೊಳ್ಳುತ್ತೇನೆ ಎಂದು ಡಿ.ಕೆ.ಸುರೇಶ್ ತಿಳಿಸಿದ್ದಾರೆ.

ಘಟನೆ ಹಿನ್ನೆಲೆಯೇನು? :

ಡಿ.ಕೆ.ಸುರೇಶ್ ಅವರ ಸಹೋದರಿಯೆಂದು ನಂಬಿಸಿ ಖರೀದಿ ನೆಪದಲ್ಲಿ 9.82 ಕೋಟಿ ರೂ. ಮೌಲ್ಯದ 660 ಗ್ರಾಂ ಚಿನ್ನವನ್ನು ಪಡೆದು ವಂಚಿಸಿದ್ದಾರೆ ಎಂದು ವಾರಾಹಿ ವರ್ಲ್ಡ್‌ ಆಫ್ ಗೋಲ್ಡ್ ಚಿನ್ನದಂಗಡಿಯ ಮಾಲಕಿ ವನಿತಾ ಎಸ್. ಐತಾಳ್ ಎಂಬುವವರು ನೀಡಿರುವ ದೂರಿನನ್ವಯ ಐಶ್ವರ್ಯಾ ಗೌಡ, ಹರೀಶ್ ಕೆ.ಎನ್. ಹಾಗೂ ಚಿತ್ರನಟ ಧರ್ಮೇಂದ್ರ ಬಿ. ವಿರುದ್ಧ ನಗರದ ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News