ಬಿಜೆಪಿ ವತಿಯಿಂದ ‘ಗ್ರಾಮ ಚಲೋʼ ಅಭಿಯಾನ : ಬಿ.ವೈ.ವಿಜಯೇಂದ್ರ

Update: 2024-02-08 13:16 GMT

ಬೆಂಗಳೂರು: ‘ಬಿಜೆಪಿ ವತಿಯಿಂದ ನಾಳೆ(ಫೆ.9)ಯಿಂದ 3 ದಿನಗಳ ಕಾಲ ‘ಗ್ರಾಮ ಚಲೋ’ ಅಭಿಯಾನ ನಡೆಯಲಿದೆ ಎಂದು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.

ಗುರುವಾರ ಇಲ್ಲಿನ ಎಚ್.ಗೊಲ್ಲಹಳ್ಳಿ ಗ್ರಾಮದಲ್ಲಿ ‘ಗ್ರಾಮ ಚಲೋ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪಕ್ಷದ ರಾಷ್ಟ್ರೀಯಾಧ್ಯಕ್ಷ ಜೆ.ಪಿ.ನಡ್ಡಾ, ಪ್ರಧಾನಿ ಮೋದಿ ಅವರ ಅಪೇಕ್ಷೆಯಂತೆ ‘ಗ್ರಾಮ ಚಲೋ’ ಅಭಿಯಾನಕ್ಕೆ ಚಾಲನೆ ನೀಡಿದ್ದೇವೆ. ರಾಜ್ಯದಲ್ಲಿ 28ಸಾವಿರಕ್ಕೂ ಹೆಚ್ಚು ಹಳ್ಳಿಗಳು, 19 ಸಾವಿರ ನಗರ ಬೂತ್‍ಗಳಲ್ಲಿ ಒಟ್ಟಾರೆಯಾಗಿ 42 ಸಾವಿರ ಕಾರ್ಯಕರ್ತರು ಮೂರು ದಿನಗಳ ಕಾಲ ನಿರಂತರವಾಗಿ ಈ ಅಭಿಯಾನದಲ್ಲಿ ಭಾಗವಹಿಸುತ್ತಾರೆ ಎಂದರು.

ನಾನು ಇಂದು ಯಶವಂತಪುರ ಕ್ಷೇತ್ರದಲ್ಲಿ ಬೂತ್ ಸಂಖ್ಯೆ 454, 455ರಲ್ಲಿ ಗ್ರಾಮ ಚಲೋ ಅಭಿಯಾನಕ್ಕೆ ಚಾಲನೆ ನೀಡಿದ್ದೇನೆ. 2047ನೆ ಇಸವಿಗೆ ಭಾರತವು ‘ವಿಕಸಿತ ಭಾರತ’ವಾಗಿ ಪರಿವರ್ತನೆ ಹೊಂದಬೇಕು; ಭಾರತವು ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಪರಿವರ್ತನೆ ಕಾಣಬೇಕೆಂಬ ಪ್ರಧಾನಿ ಮೋದಿ ಕನಸು ನನಸಾಗಲು ಗ್ರಾಮಗಳೂ ಅಭಿವೃದ್ಧಿ ಹೊಂದಬೇಕಿದೆ ಎಂದು ವಿಶ್ಲೇಷಿಸಿದರು.

ಈ ನಿಟ್ಟಿನಲ್ಲಿ ‘ಗ್ರಾಮ ಚಲೋ’ ಅಭಿಯಾನವು ಉತ್ತಮ ಅಭಿಯಾನ ಆಗಲಿದೆ. ಈ ಅಭಿಯಾನದ ಮೂಲಕ ಪ್ರತಿ ಗ್ರಾಮ, ಪ್ರತಿ ಮನೆಗೂ ಬಿಜೆಪಿ ಕಾರ್ಯಕರ್ತರು ತಲುಪಲಿದ್ದು, ಕೇಂದ್ರ ಸರಕಾರವು ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೊಟ್ಟ ಜನಪರ ಯೋಜನೆಗಳನ್ನು ಮನೆಮನೆಗೆ ತಲುಪಿಸುವಂತಾಗುತ್ತದೆ ಎಂದು ಅವರು ತಿಳಿಸಿದರು.

ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್ ಒಗ್ಗಟ್ಟಾಗಿ ಎಲ್ಲ ಕ್ಷೇತ್ರಗಳನ್ನು ಗೆಲ್ಲಬೇಕೆಂಬ ಗುರಿ ಇಟ್ಟುಕೊಂಡಿದ್ದೇವೆ. 28 ಸೀಟುಗಳ ಮತ ಎಣಿಕೆ ಸಂದರ್ಭದಲ್ಲಿ ಒಂದೊಂದು ಸೀಟು ಗೆಲ್ಲಲು ಕಾಂಗ್ರೆಸ್‍ನವರು ಪರಿತಪಿಸುತ್ತಾರೆ. ಅಂತಹ ವಾತಾವರಣ ಈಗಾಗಲೇ ನಿರ್ಮಾಣವಾಗಿದೆ. ನಮ್ಮ ಕಾರ್ಯಕರ್ತರು ರಣೋತ್ಸಾಹದಲ್ಲಿದ್ದಾರೆ. ಮೋದಿ ಮತ್ತೊಮ್ಮೆ ಎಂಬ ವಿಷಯದಲ್ಲಿ ಮತದಾರರೂ ಉತ್ಸಾಹದಲ್ಲಿದ್ದಾರೆ. ಬಿಜೆಪಿ-ಜೆಡಿಎಸ್ ಒಗ್ಗಟ್ಟಾಗಿ ಎಲ್ಲ ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸ ಇದೆ

ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News