ಕನ್ನಡವನ್ನು ಇತರರಿಗೆ ಪರಿಚಯ ಮಾಡಿಕೊಳ್ಳುವಲ್ಲಿ ಸೋಲುತ್ತಿದ್ದೇವೆ : ಹಂಪ ನಾಗರಾಜಯ್ಯ
ಬೆಂಗಳೂರು: ನಾವು ಬೇರೆ ಭಾಷೆಗಳಿಂದ ಸಾಹಿತ್ಯವನ್ನು ಬರಮಾಡಿಕೊಳ್ಳುವ ನಿಟ್ಟಿನಲ್ಲಿ ಬಹಳಷ್ಟು ಕೆಲಸವನ್ನು ಮಾಡುತ್ತೇವೆ. ಆದರೆ ನಮ್ಮ ಕನ್ನಡವನ್ನು ಇತರರಿಗೆ ಪರಿಚಯ ಮಾಡಿಕೊಳ್ಳುವಲ್ಲಿ ನಾವು ಸೋಲುತ್ತಿದ್ದೇವೆ ಎಂದು ಹಿರಿಯ ಸಾಹಿತಿ ನಾಡೋಜ ಹಂಪ ನಾಗರಾಜಯ್ಯ ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ನಗರದ ಖಾಸಗಿ ಹೊಟೆಲ್‍ನಲ್ಲಿ ನಡೆದ ಬೆಂಗಳೂರು ಸಾಹಿತ್ಯ ಉತ್ಸವದ 13ನೇ ಆವೃತ್ತಿ ಕಾರ್ಯಕ್ರಮದಲ್ಲಿ ‘ಸ್ಪೆಕ್ಟ್ರಮ್ ಆಫ್ ಕ್ಲಾಸಿಕಲ್ ಲಿಟರೇಚರ್ ಇನ್ ಕರ್ನಾಟಕ’ ವಿಷಯದ ಕುರಿತು ವಿಮರ್ಶಕಿ ಎಂ.ಎಸ್.ಆಶಾದೇವಿ ಅವರೊಂದಿಗಿನ ಸಂವಾದದಲ್ಲಿ ಅವರು ಮಾತನಾಡಿದರು.
ಕನ್ನಡ ಸಾಹಿತ್ಯ ಒಂದು ದೊಡ್ಡ ವಲಯವನ್ನು ಹೊಂದಿದೆ. ಕನ್ನಡ ಭಾಷೆಯನ್ನು ಮೊದಲು ಮಾತನಾಡಲು ಮಾತ್ರ ಬಳಕೆ ಮಾಡಲಾಗುತ್ತಿದ್ದು, ಯಾವಾಗ ಸಾಹಿತ್ಯಕ್ಕೆ ತನ್ನ ಮೊದಲ ಲಗ್ಗೆಯನ್ನು ಇಟ್ಟಿತೋ ಆಗ ಬಹಳಷ್ಟು ಪದಗಳನ್ನು ಸಂಸ್ಕೃತ ಮತ್ತು ಪ್ರಾಕೃತದಿಂದ ತರಲಾಯಿತು ಎಂದು ತಿಳಿಸಿದರು.
ಕನ್ನಡ ಸಾಹಿತ್ಯವು ಬಹಳಷ್ಟು ಆಳವಾದ ಇತಿಹಾಸವನ್ನು ಒಳಗೊಂಡಿದೆ. ವಿಶ್ವದ ಹಲವು ಸಾಹಿತಿಗಳು ಕನ್ನಡ ಸಾಹಿತ್ಯ ಹಾಗೂ ದಕ್ಷಿಣ ಭಾರತದ ಸಾಹಿತ್ಯವನ್ನು ತಿಳಿಯುವ ಕುತೂಹಲದ ಬಗ್ಗೆ ತಿಳಿಸಿದರು.