ಪತ್ರಿಕಾ ವಿತರಕರ ವಯಸ್ಸಿನ ಮಿತಿ 70 ವರ್ಷಕ್ಕೆ ಹೆಚ್ಚಳ ; ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್‌ಗೆ ಅಭಿನಂದನೆ
ಬೆಂಗಳೂರು : ಪತ್ರಿಕಾ ವಿತರಕರಿಗಾಗಿ ರೂಪಿಸಲಾಗಿರುವ ಯೋಜನೆಯ ವಯಸ್ಸಿನ ಮಿತಿಯನ್ನು ಹೆಚ್ಚಳ ಮಾಡಿದ್ದಕ್ಕಾಗಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರನ್ನು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಹಾಗೂ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಅಭಿನಂದನೆ ಸಲ್ಲಿಸಿದೆ.
ಶನಿವಾರ ಇಲ್ಲಿನ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮತ್ತು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷ ಕೆ.ಶಂಭುಲಿಂಗ ಅವರು ಅಭಿನಂದಿಸಿದರು.
ಅಸಂಘಟಿತ ವಲಯದಲ್ಲಿರುವ ಪತ್ರಿಕಾ ವಿತರಕ ಕಾರ್ಮಿಕರಿಗಾಗಿ ಕಾರ್ಮಿಕ ಇಲಾಖೆಯು ರೂಪಿಸಿರುವ ಯೋಜನೆಯ ವಯಸ್ಸಿನ ಮಿತಿಯನ್ನು ಈ ಮೊದಲು 16 ವರ್ಷದಿಂದ 60 ವರ್ಷಕ್ಕೆ ಮಾತ್ರ ಸೀಮಿತ ಮಾಡಲಾಗಿತ್ತು. ಇದರಿಂದ ಸಾವಿರಾರು ಪತ್ರಿಕಾ ವಿತರಕರು ಯೋಜನೆ ಪ್ರಯೋಜನೆ ಪಡೆಯಲಾಗದೆ ಸಮಸ್ಯೆಯಲ್ಲಿರುವುದನ್ನು ಗಮನಕ್ಕೆ ತಂದು, ಯೋಜನೆಯ ವಯಸ್ಸಿನ ಮಿತಿಯನ್ನು 70 ವರ್ಷದವರೆಗೆ ವಿಸ್ತರಿಸುವಂತೆ ಮನವಿ ಸಲ್ಲಿಸಲಾಗಿತ್ತು.
ಇದೇ ವೇಳೆ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಮಾತನಾಡಿ, ಪತ್ರಿಕಾ ವಿತರಕರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕಾಳಜಿ ಇದ್ದು, ಕಾರ್ಮಿಕ ಸಚಿವ ಸಂತೋಷ್ ಲಾಡ್ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಕಾರಣಕರ್ತರಾಗಿದ್ದಾರೆ ಎಂದು ನುಡಿದರು.
ಈ ಸಂದರ್ಭದಲ್ಲಿ ಪ್ರೆಸ್ ಕ್ಲಬ್ ಮಾಜಿ ಅಧ್ಯಕ್ಷ ಸದಾಶಿವ ಶೆಣೈ, ಜಗದೀಶ್ ತಂಡ್ರೆ ಇದ್ದರು.