ಆನೇಕಲ್ | ಉಪ ಲೋಕಾಯುಕ್ತರ ಸಂಬಂಧಿಕ ಎಂದು ತಹಶೀಲ್ದಾರ್ ರಿಗೆ ವಂಚಿಸಲು ಯತ್ನ: ಆರೋಪಿಯ ಬಂಧನ

Update: 2024-12-15 06:37 GMT

ಆನೇಕಲ್: ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಹೆಸರನ್ನು ದುರುಪಯೋಗಪಡಿಸಿಕೊಂಡು ಆನೇಕಲ್ ವಿಶೇಷ ತಹಶೀಲ್ದಾರ್ ಕರಿಯಾ ನಾಯಕ್ ರ ಮೇಲೆ ಪ್ರಭಾವ ಬೀರಿ ಅಕ್ರಮವಾಗಿ ಜಮೀನು ಖಾತೆ ಬದಲಾವಣೆಗೆ ಯತ್ನಿಸಿದ ಆರೋಪದಲ್ಲಿ ವ್ಯಕ್ತಿಯೋರ್ವನನ್ನು ಆನೇಕಲ್ ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಬಳ್ಳಾಪುರ ಮೂಲದ ಆನಂದ್ ಕುಮಾರ್ ಬಂಧಿತ ಆರೋಪಿ.

ಲೋಕಾಯುಕ್ತ ಇಲಾಖೆಯ ಉಪನಿಬಂಧಕ ಅರವಿಂದ್ ಎನ್.ವಿ. ನೀಡಿದ ದೂರಿನ ಮೇರೆಗೆ ಆನೇಕಲ್ ಇನ್ ಸ್ಪೆಕ್ಟರ್ ಬಿ.ಎಂ. ತಿಪ್ಪೇಸ್ವಾಮಿ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ. 

ಘಟನೆ ವಿವರ

ಆನೇಕಲ್ ವಿಶೇಷ ತಹಶೀಲ್ದಾರ್ ಕರಿಯಾ ನಾಯಕ್ ಕಚೇರಿಗೆ ಆಗಮಿಸಿದ್ದ ಆರೋಪಿ ಆನಂದ್, ತಾನು ಕರ್ನಾಟಕ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪರ ಸಂಬಂಧಿಕ ಹಾಗೂ ತಾನು ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಉದ್ಯೋಗಿ ಎಂದು ಹೇಳಿ, ಸರ್ಜಾಪುರ ಹೋಬಳಿ ಚಿಕ್ಕನಹಳ್ಳಿ ಸನಂ 18/ಪಿ16 ಹೊಸ ನಂಬರ್ 191 ರ ಒಂದು ಎಕರೆ ಜಮೀನನ್ನು ಎಸ್.ಎನ್.ರಾಮಸ್ವಾಮಿ ಅಡಿಗ ಎಂಬವರಿಂದ ನಾರಾಯಣ ಅಡಿಗ ಎಂಬವರ ಹೆಸರಿಗೆ ಖಾತೆ ಬದಲಾಯಿಸುವಂತೆ ಒತ್ತಡ ಹೇರಿದ್ದಾನೆ.

ಅಷ್ಟಲ್ಲದೆ ತನ್ನ ಮೊಬೈಲ್ ನಿಂದ ಯಾರಿಗೋ ಕಾಲ್ ಮಾಡಿ ಉಪ ಲೋಕಾಯುಕ್ತರು ಮಾತನಾಡುತ್ತಿದ್ದಾರೆಂದು, ಮತ್ತೊಂದು ಬಾರಿ ಲೋಕಾಯುಕ್ತ ಐ.ಜಿ. ಮಾಡನಾಡುತ್ತಿರುತ್ತಾರೆಂದು, ಮತ್ತೊಂದು ಬಾರಿ ಲೋಕಾಯುಕ್ತ ಎಸ್ಪಿ ಮಾತನಾಡುತ್ತಿದ್ದಾರೆ ಹೇಳಿ ತಹಶೀಲ್ದಾರ್ ರಿಗೆ ಮೊಬೈಲ್ ಕೊಟ್ಟು ಮಾತನಾಡಿಸಿದ್ದಾನೆ. ಆ ಕಡೆಯಿಂದ ಮಾತನಾಡಿದ ವ್ಯಕ್ತಿಗಳು ತಾವು ಲೋಕಾಯುಕ್ತ ನ್ಯಾಯಮೂರ್ತಿ, ಲೋಕಾಯುಕ್ತ ಐ.ಜಿ. ಮತ್ತು ಲೋಕಾಯುಕ್ತ ಎಸ್ಪಿ ಎಂದು ಹೇಳಿ ಮಾತನಾಡಿದ್ದಲ್ಲದೆ, "ನಿಮ್ಮ ಬಳಿ ಬಂದಿರುವ ಆನಂದ್ ಕುಮಾರ್ ನಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾನೆ, ಆತನ ಕೆಲಸವನ್ನು ಯಾವುದೇ ತಡ ಮಾಡದೆ ಬೇಗ ಮಾಡಿಕೊಡಿ" ಎಂದು ಒತ್ತಡ ಹೇರಿದ್ದಾರೆ. ಈ ಬಗ್ಗೆ ಸಂಶಯಗೊಂಡ ವಿಶೇಷ ತಹಶೀಲ್ದಾರ್ ಕರಿಯಾ ನಾಯಕ್ ಅವರು ಲೋಕಾಯುಕ್ತಕ್ಕೆ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಪರಿಶೀಲಿಸಿದ ಲೋಕಾಯುಕ್ತಕ್ಕೆ ಆರೋಪಿ ಆನಂದ್ ಕುಮಾರ್ ತನ್ನ ಬಳಿ 2, 3 ಮೊಬೈಲ್ ನಂಬರ್ ಗಳನ್ನು ಇಟ್ಟುಕೊಂಡಿದ್ದು, ಅವುಗಳಿಂದ ಕರೆ ಮಾಡಿದಾಗ ಟ್ರೂ ಕಾಲರ್ ನಲ್ಲಿ ಕರ್ನಾಟಕ ಲೋಕಾಯುಕ್ತ ಕಚೇರಿ ಎಂದು, ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪರ ಹೆಸರು ಕರ್ನಾಟಕ ಲೋಕಾಯುಕ್ತ ಸಂಸ್ಥೆ ಬೆಂಗಳೂರು ಎಂದು ಬರುವಂತೆ ಮಾಡಿಟ್ಟುಕೊಂಡಿರುವುದು ಪತ್ತೆಯಾಗಿದೆ. ಆರೋಪಿಯ ವಂಚನೆ ಬಗ್ಗೆ ಲೋಕಾಯುಕ್ತ ಇಲಾಖೆಯ ಉಪನಿಬಂಧಕರು ಆನೇಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಅದರಂತೆ ಪ್ರಕರಣ ದಾಖಲಿಸಿಕೊಂಡಿರುವ ಆನೇಕಲ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News