ಅನಧಿಕೃತ ಫ್ಲೆಕ್ಸ್, ಬ್ಯಾನರ್: ಎಫ್‍ಐಆರ್ ದಾಖಲಿಸಲು ತುಷಾರ್ ಗಿರಿನಾಥ್ ಸೂಚನೆ

Update: 2025-03-17 22:43 IST
ಅನಧಿಕೃತ ಫ್ಲೆಕ್ಸ್, ಬ್ಯಾನರ್: ಎಫ್‍ಐಆರ್ ದಾಖಲಿಸಲು ತುಷಾರ್ ಗಿರಿನಾಥ್ ಸೂಚನೆ

ತುಷಾರ್ ಗಿರಿನಾಥ್

  • whatsapp icon

ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಅಳವಡಿಸಿರುವ ಫ್ಲೆಕ್ಸ್, ಬ್ಯಾನರ್ ಗಳನ್ನು ತೆರವುಗೊಳಿಸಿ ಎಫ್‍ಐಆರ್ ದಾಖಲಿಸಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಸೋಮವಾರ ಇಲ್ಲಿನ ಬಿಬಿಎಂಪಿ ಕೇಂದ್ರ ಕಛೇರಿಯಲ್ಲಿ ಆಯೋಜಿಸಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಗರದಲ್ಲಿ ಅನಧಿಕೃತವಾಗಿ ಅಳವಡಿಸುವ ಫ್ಲೆಕ್ಸ್, ಬ್ಯಾನರ್ ಗಳ ಸಂಖ್ಯೆ ಹೆಚ್ಚಾಗಿದ್ದು, ನಗರದ ಎಲ್ಲ ಕಡೆ ತೆರವುಗೊಳಿಸಬೇಕು. ಅಲ್ಲದೆ ಫ್ಲೆಕ್ಸ್, ಬ್ಯಾನರ್ ಅಳವಡಿಸಿರುವವರಿಗೆ ದುಪ್ಪಟ್ಟು ದಂಡ ವಿಧಿಸುವ ಜೊತೆಗೆ ಎಫ್‍ಐಆರ್ ದಾಖಲಿಸಬೇಕು ಎಂದರು.

ಬಳ್ಳಾರಿ ರಸ್ತೆಯುದ್ದಕ್ಕೂ ಫ್ಲೆಕ್ಸ್, ಬ್ಯಾನರ್‍ಗಳನ್ನು ಅಳವಡಿಸಲಾಗಿದ್ದು, ಪಶ್ಚಿಮ, ಪೂರ್ವ ಹಾಗೂ ಯಲಹಂಕ ವಲಯ ವ್ಯಾಪ್ತಿಯಲ್ಲಿ ಅಧಿಕಾರಿಗಳು ಪರಿಶೀಲಿಸಿ ತೆರವು ಕಾರ್ಯಾಚರಣೆಯನ್ನು ನಡೆಸಬೇಕು. ಫ್ಲೆಕ್ಸ್ ತೆರವುಗೊಳಿಸಲು ಖರ್ಚಾಗುವ ಹಣವನ್ನು ಫ್ಲೆಕ್ಸ್‍ಗಳನ್ನು ಅಳವಡಿಸಿರುವವರಿಂದಲೇ ವಸೂಲಿ ಮಾಡಬೇಕು ಎಂದು ಅವರು ಹೇಳಿದರು.

ರಾಜಕಾಲುವೆಗಳಲ್ಲಿ ಕಸ ಬಿಸಾಡದಂತೆ ಕ್ರಮ ಕೈಗೊಳ್ಳಿ :

ರಾಜಕಾಲುವೆ ಪಕ್ಕದಲ್ಲಿ ಬರುವ ಮನೆಗಳು ಹಾಗೂ ಕೊಳಗೇರಿ ಪ್ರದೇಶಗಳಲ್ಲಿ ತ್ಯಾಜ್ಯ ಸಂಗ್ರಹಣಾ ಕಾರ್ಯ ಸರಿಯಾಗಿ ಮಾಡಬೇಕು. ರಾಜಕಾಲುವೆಗಳಲ್ಲಿ ತ್ಯಾಜ್ಯ ಬಿಸಾಡದಂತೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ರಾಜಕಾಲುವೆಗಳಲ್ಲಿ ಕಸ ಬಿಸಾಡುವ ಸ್ಥಳಗಳನ್ನು ಗುರುತಿಸಿ ಮಾರ್ಷಲ್‍ಗಳನ್ನು ನಿಯೋಜನೆ ಮಾಡಬೇಕು ಎಂದು ಅವರು ತಿಳಿಸಿದರು.

ಈ ವೇಳೆ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್, ಸುರಳ್ಕರ್ ವಿಕಾಸ್ ಕಿಶೋರ್, ಡಾ.ಕೆ. ಹರೀಶ್ ಕುಮಾರ್, ಅವಿನಾಶ್ ಮೆನನ್ ರಾಜೇಂದ್ರನ್, ಪ್ರೀತಿ ಗೆಹ್ಲೋಟ್ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

12 ಎಫ್‍ಐಆರ್ ದಾಖಲು, 12 ಲಕ್ಷ ರೂ. ದಂಡ :

ನಗರದ ಪೂರ್ವ, ಪಶ್ಚಿಮ ಹಾಗೂ ಯಲಹಂಕ ಸೇರಿದಂತೆ ಮೂರೂ ವಲಯಗಳಲ್ಲಿ ರವಿವಾರದಿಂದ 1,350ಕ್ಕೂ ಹೆಚ್ಚು ಫ್ಲೆಕ್ಸ್, ಬ್ಯಾನರ್‍ಗಳನ್ನು ತೆರವುಗೊಳಿಸಲಾಗಿದೆ. 600ಕ್ಕೂ ಹೆಚ್ಚು ಪಕ್ಷದ ಧ್ವಜಗಳನ್ನು ತೆರವುಗೊಳಿಸಲಾಗಿದೆ. ಇದುವೆರೆಗೆ 12 ಎಫ್‍ಐಆರ್‍ಗಳನ್ನು ದಾಖಲಿಸಲಾಗಿದ್ದು, 12 ಲಕ್ಷ ರೂ. ದಂಡ ವಿಧಿಸಲಾಗಿದೆ.

-ತುಷಾರ್ ಗಿರಿನಾಥ್, ಬಿಬಿಎಂಪಿ ಮುಖ್ಯ ಆಯುಕ್ತ 

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News