ಸಾರಿಗೆ ಪ್ರಯಾಣ ದರ ನೆರೆ ರಾಜ್ಯಗಳಿಗಿಂತ ಕಡಿಮೆ ಇದೆ : ಮುಖ್ಯಮಂತ್ರಿ

ಬೆಂಗಳೂರು : ಸಾಮಾನ್ಯ ಸಾರಿಗೆ, ವೇಗದೂತ, ರಾಜಹಂಸ ಡೀಲಕ್ಸ್ ಬಸ್ಸುಗಳು ಒಂದು ಕಿಮೀ ಗೆ ತಗಲುವ ದರಗಳು ಮಹಾರಾಷ್ಟ್ರ, ಆಂಧ್ರಪ್ರದೇಶ ರಾಜ್ಯಗಳಿಗಿಂತ ಕಡಿಮೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಉತ್ತರ ನೀಡುವ ವೇಳೆ ಅಂಕಿಅಂಶಗಳ ಸಮೇತ ವಿವರಿಸಿದರು.
ವಿದ್ಯಾರ್ಥಿಗಳ ಪಾಸ್‍ಗಳ ದರವನ್ನು 12 ವರ್ಷಗಳಿಂದ ಹೆಚ್ಚಿಸಿಲ್ಲ. ಬಿಜೆಪಿ ಅವಧಿಯಲ್ಲಿಯೂ ಪ್ರತಿ ವರ್ಷ ಬಸ್ಸಿನ ದರ ಹೆಚ್ಚಿಸಲಾಗಿದೆ. ಡೀಸೆಲ್ ಬೆಲೆ ಹೆಚ್ಚಿಗೆ ಆದಾಗ ದರಯೇರಿಸಲೇ ಬೇಕಾಗುತ್ತದೆ. ವೇತನ ಹೆಚ್ಚು ಮಾಡಿದಾಗ ನಷ್ಟಕ್ಕೆ ಸಾರಿಗೆ ನಿಗಮಗಳು ಒಳಗಾಗಿವೆ. ಈ ವರ್ಷ 4,899 ಬಸ್ಸುಗಳನ್ನು ಹೊಸದಾಗಿ ಸೇರಿಸಿ ಸಾರಿಗೆ ಸಂಸ್ಥೆಯನ್ನು ಬಲಪಡಿಸಿದ್ದೇವೆ ಎಂದು ಅವರು ಹೇಳಿದರು.
ಹೆಚ್ಚುವರಿ ಅಬಕಾರಿ ಶುಲ್ಕವನ್ನು 31.84 ರೂ.ಗಳಿಗೆ ಹೆಚ್ಚು ಮಾಡಿದರು. ವೇತನ, ಡೀಸೆಲ್ ಬೆಲೆ ಹೆಚ್ಚಳ ಮಾಡಿದಾಗ ಅನಿವಾರ್ಯವಾಗಿ ದರ ಏರಿಸಬೇಕಾಗಿದೆ. ಇಷ್ಟೇಲ್ಲಾ ಇದ್ದರೂ ನಾವು 4,900 ಬಸ್ಸುಗಳನ್ನು ಖರೀದಿ ಮಾಡಿದ್ದೇವೆ. ಪ್ರಧಾನಿ ಮೋದಿ ಸರಕಾರ ಡೀಸೆಲ್ ಬೆಲೆಯನ್ನು ಯದ್ವಾ ತದ್ವಾ ಏರಿಸಿದ್ದರಿಂದ ಪ್ರಯಾಣ ದರ ಏರಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ಇದನ್ನು ಹೇಳಿದರೆ ಬಿಜೆಪಿ ಸದಸ್ಯರಿಗೆ ಸಿಟ್ಟು ಬರುತ್ತದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಮೆಟ್ರೋ ರೈಲು ದರ ಹೆಚ್ಚಳ: ಮೆಟ್ರೋ ರೈಲು ಕಾರ್ಯಾಚರಣೆ ಮತ್ತು ನಿರ್ವಹಣೆ ಕಾಯ್ದೆ 2005 ರಲ್ಲಿ ಮಾಡಲಾಗಿದೆ. ಕೇಂದ್ರ ಸರಕಾರ ಕಾಲಕಾಲಕ್ಕೆ ನಿವೃತ್ತ ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ದರ ನಿಗದಿ ಮಾಡುವ ಸಮಿತಿ ರಚಿಸಬಹುದು ಎಂದು ಇದರಲ್ಲಿ ಹೇಳಲಾಗಿದೆ. ಬಿಜೆಪಿ ಅಧಿಕಾರದ ಅವಧಿಯಲ್ಲಿ ದರ ನಿಗದಿ ಮಾಡುವ ಬಗ್ಗೆ ಪತ್ರ ಬರೆದು, ಸಮಿತಿ ರಚನೆ ಮಾಡಲಾಗಿದೆ ಎಂದು ಅವರು ಹೇಳಿದರು.
2024ರ ಡಿ.16ರಂದು ವರದಿ ಕೊಟ್ಟ ಮೇಲೆ ಮೆಟ್ರೋ ಪ್ರಯಾಣ ದರ ಪರಿಷ್ಕರಣೆ ಮಾಡಲಾಗಿದೆ. ನಂತರದಲ್ಲಿ ಇತಿಮಿತಿಯೊಳಗೆ ಸ್ವಲ್ಪ ಬೆಲೆ ಕಡಿಮೆ ಮಾಡಲಾಗಿದೆ. ಒಮ್ಮೆ ಸಮಿತಿ ಶಿಫಾರಸ್ಸು ಮಾಡಿದ ಮೇಲೆ ಹಿಂಪಡೆಯಲು ಸಾಧ್ಯವಿಲ್ಲ. ಮೆಟ್ರೋ ದರ ಹೆಚ್ಚಳ ನಮ್ಮ ಕೈಯಲ್ಲಿ ಇಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.
ರೈತರ ಆತ್ಮಹತ್ಯೆ: ನಮ್ಮ ಸರಕಾರದ ಅವಧಿಯಲ್ಲಿ ರೈತರ ಆತ್ಮಹತ್ಯೆ ಕಡಿಮೆಯಾಗಿದೆ. ಫೆಬ್ರವರಿ ಅಂತ್ಯದವರೆಗೆ 624 ರೈತರ ಆತ್ಮಹತ್ಯೆಗಳು ನಡೆದಿವೆ. ರೈತರ ಆತ್ಮಹತ್ಯೆಗಳು ನಡೆಯಬಾರದು. ರೈತರ ಆತ್ಮಹತ್ಯೆಗಳು ಪೂರ್ಣವಾಗಿ ನಿಲ್ಲಬೇಕೆನ್ನುವುದು ಸರಕಾರದ ಆಶಯ ಎಂದು ಅವರು ಹೇಳಿದರು.
ಅಭಿವೃದ್ಧಿ ಯೋಜನೆಗಳಿಗೂ ಹಣ ಮೀಸಲಿಟ್ಟು, ಗ್ಯಾರಂಟಿಗಳ ಜೊತೆಗೆ ಕರ್ನಾಟಕದ ಪ್ರಗತಿಯನ್ನೂ ಮಾಡಿದ್ದೇವೆ. ನಮ್ಮ ಬಂಡವಾಳ ವೆಚ್ಚ 56 ಸಾವಿರ ಕೋಟಿ ರೂ. ಕಳೆದ ವರ್ಷ ವೆಚ್ಚವಾಗಿದ್ದರೆ, 2025-26 ನೇ ಸಾಲಿಗೆ 85 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.
ಬೆಂಗಳೂರು ಅಭಿವೃದ್ಧಿಗೆ ಉಚ್ಚ ನ್ಯಾಯಾಲಯದವರು ಬಿಜೆಪಿ ಅಧಿಕಾರದಲ್ಲಿದ್ದಾಗ ಏನೇನು ಹೇಳಿದ್ದರು ಎಂದು ತಿಳಿಸಬೇಕಾ ಎಂದು ಪ್ರಶ್ನಿಸಿದ ಸಿಎಂ, 1,700 ಕೋಟಿ ರೂ. ವೈಟ್ ಟಾಪಿಂಗ್‍ಗೆ, 15 ಲಕ್ಷ ರೂ.ಗಳನ್ನು ಗುಂಡಿ ಮುಚ್ಚಲು, ಡಾಂಬರೀಕರಣಕ್ಕೆ 700 ಕೋಟಿ ರೂ. ನೀಡಲಾಗಿದೆ. ನಾವು 7 ಸಾವಿರ ಕೋಟಿ ರೂ.ಗಳನ್ನು ಮುಂದಿನ ವರ್ಷಕ್ಕೆ ವೆಚ್ಚ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
‘ರಾಜ್ಯಪಾಲರ ಭಾಷಣದ ಮೇಲಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಉತ್ತರವನ್ನು ವಿರೋಧಿಸಿ ಪ್ರತಿಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿದರು’.