ಹಾಸನ ಪೆನ್‍ಡ್ರೈವ್ ಪ್ರಕರಣ : ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಮಹಿಳಾ ಸಂಘಟನೆಗಳ ಒತ್ತಾಯ

Update: 2024-04-26 17:21 GMT

Photo : NDTV

ಬೆಂಗಳೂರು: ಹಾಸನದ ಪೆನ್‍ಡ್ರೈವ್ ಪ್ರಕರಣ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಈ ಪ್ರಕರಣದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ವಿವಿಧ ಮಹಿಳಾ ಸಂಘಟನೆಗಳು ಹಾಗೂ ಹೋರಾಟಗಾರ್ತಿಯರು ಆಗ್ರಹಿಸಿದ್ದಾರೆ.

ಶುಕ್ರವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್‍ಎಸ್) ಕಾರ್ಯದರ್ಶಿ ಶೋಭಾ ಎಸ್., ‘ಎರಡು ಸಾವಿರಕ್ಕೂ ಅಧಿಕ ಹೆಣ್ಣು ಮಕ್ಕಳನ್ನು ಕಾಮಕಾಂಡದಲ್ಲಿ ತೊಡಿಗಿಸಿರುವ ಮತ್ತು ಅದರ ವಿಡಿಯೋಗಳನ್ನು ಪೆನ್‍ಡ್ರೈವ್‍ಗಳ ಮೂಲಕ ಹಾಸನದ ಹಾದಿ ಬೀದಿಗಳಲ್ಲಿ ಚೆಲ್ಲಾಡಿರುವುದು ರಾಜ್ಯದಲ್ಲಿ ತಲ್ಲಣ ಉಂಟು ಮಾಡಿದೆ. ಈ ಭೀಕರ ಘಟನೆಯಲ್ಲಿ ತೊಡಗಿದ ವ್ಯಕ್ತಿಗಳು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ವಿಕೃತ ಮನಸ್ಥಿತಿ: ಮಾಜಿ ಪ್ರಧಾನಿ ದೇವೇಗೌಡರ ಮಕ್ಕಳು, ಮೊಮ್ಮಕ್ಕಳು ಹೆಣ್ಣು ಮಕ್ಕಳ ವಿಚಾರದಲ್ಲಿ ಈ ರೀತಿಯಲ್ಲಿ ನಡೆದುಕೊಳ್ಳುತ್ತಾರೆಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಇದು ಸಂಸದ ಪ್ರಜ್ವಲ್ ರೇವಣ್ಣನ ವಿಕೃತ ಕಾಮದ ಮನಸ್ಥಿತಿ. ಈ ಘಟನೆಯಿಂದ ಸಂತ್ರಸ್ತ ಮಹಿಳೆಯರು ಸಮಾಜದಲ್ಲಿ ಮುಖ ತೋರಿಸುವುದಕ್ಕೆ ಆಗದೇ, ಆತ್ಮಹತ್ಯೆಗೆ ಒಳಗಾಗುತ್ತಾರೆ. ಅನೇಕರು ಮಾನಸಿಕ ಆಘಾತಕ್ಕೆ ಒಳಗಾಗುತ್ತಾರೆ ಎಂದು ಲೇಖಕಿ ಡಾ.ವಿಜಯಮ್ಮ ಆತಂಕ ವ್ಯಕ್ತಪಡಿಸಿದ್ದಾರೆ.

ಹೆಣ್ಣು ಮಕ್ಕಳ ಭವಿಷ್ಯದ ಸ್ಥಿತಿ ಸರಳವಾಗಿಲ್ಲ. ಸಂತ್ರಸ್ತರಿಗೆ ಯಾವ ಘಳಿಗೆಯಲ್ಲಿ ಏನು ಆಗುತ್ತೋ ಎನ್ನುವ ಆತಂಕ ಕಾಡುತ್ತಿದೆ. ಸಂತ್ರಸ್ತರಿಗೆ ಮನೆಗಳಲ್ಲಿಯೂ ಒಳ್ಳೆಯ ಆದರ, ಆಶ್ರಯ ಸಿಕ್ಕಿರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸರಕಾರಗಳು ಹಾಗೂ ಮಹಿಳಾ ಸಂಘಟನೆಗಳು ಸಂತ್ರೆಸ್ತೆಯರಿಗೆ ಧೈರ್ಯ ತುಂಬಿ, ಸಂಕಟದಿಂದ ಹೊರಗೆ ತರಬೇಕು ಮತ್ತು ಪೋಷಕರಿಗೂ ಧೈರ್ಯ ತುಂಬಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಆಘಾತಕಾರಿ: ಪೆನ್‍ಡ್ರೈವ್ ಪ್ರಕರಣ ಅತ್ಯಂತ ಭೀಕರ, ಆಘಾತಕಾರಿ ಮತ್ತು ಹೇಯಕೃತ್ಯ. ಮಹಿಳೆಯರ ಘನತೆಯನ್ನು ನುಚ್ಚುನೂರು ಮಾಡಿದೆ. ಯಾರದೋ ದುರುದ್ದೇಶಕ್ಕೆ ಬಲಿಯಾದ ಹೆಣ್ಣುಮಕ್ಕಳ ಸ್ಥಿತಿ ನೆನೆಸಿಕೊಂಡರೆ ಮನಸ್ಸು ತಲ್ಲಣಿಸುತ್ತದೆ. ಅದರಲ್ಲೂ ಚುನಾವಣೆಯ ಸಂದರ್ಭದಲ್ಲಿ ದ್ವೇಷದ ದಳ್ಳುರಿಗೆ 2ಸಾವಿರಕ್ಕೂ ಹೆಚ್ಚು ಮಹಿಳೆಯರ ಗೌರವ ಮಣ್ಣುಪಾಲು ಮಾಡಿರುವುದು ಖಂಡನೀಯ. ಈ ಕೃತ್ಯ ಎಸಗಿದವರು, ವೀಡಿಯೋ ಮಾಡಿದವರು, ಪೆನ್‍ಡ್ರೈವ್ ಬಿಸಾಡಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಲೇಖಕಿ ಡಾ.ವಸುಂಧರಾ ಭೂಪತಿ ಮನವಿ ಮಾಡಿದ್ದಾರೆ.

ಮಹಿಳೆ ಘನತೆಗೆ ಧಕ್ಕೆ: ‘ಮಹಿಳೆಯರ ಘನತೆಗೆ ಧಕ್ಕೆಯುಂಟು ಮಾಡುತ್ತಿರುವ ಇಂತಹ ಘಟನೆ ಖಂಡಿಸುತ್ತಾ, ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಜನಪ್ರತಿನಿಧಿಗಳು ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿರುವುದು ವಿಪರ್ಯಾಸ. ಈ ಘಟನೆಗೆ ಕಾರಣರಾದವರನ್ನು ಹಾಗೂ ವಿಡಿಯೋ ಮಾಡಲು ಮಹಿಳೆಯರನ್ನು ಬಳಸಿಕೊಂಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಮಹಿಳೆಯರ ಘನತೆಗೆ ಕುಂದುಂಟು ಮಾಡುವ ಯಾವ ಸಂಗತಿಗಳನ್ನೂ ಹಗುರವಾಗಿ ಪರಿಗಣಿಸದೇ ಈ ಪ್ರಕರಣದ ನಿಷ್ಪಕ್ಷಪಾತ ತನಿಖೆ ಮಾಡಬೇಕು ಎಂದು ಜನವಾದಿ ಮಹಿಳಾ ಸಂಘಟನೆಯ ಗೌರಮ್ಮ ಕೋರಿದ್ದಾರೆ.

‘ರಾಜ್ಯದಲ್ಲಿ ಆತಂಕ ಹುಟ್ಟಿಸುವ ಭಯಾನಕ ಪ್ರಕರಣ ಇದು. ಈ ಪ್ರಕರಣದಲ್ಲಿ ಸಾವಿರಾರು ಹೆಣ್ಣು ಮಕ್ಕಳ ಜೀವನ ಸಿಲುಕಿಕೊಂಡಿದೆ. ಸರಕಾರ ಸಂತ್ರಸ್ತರಿಗೆ ರಕ್ಷಣೆ ನೀಡಬೇಕು ಮತ್ತು ಕೂಡಲೇ ಪೆನ್‍ಡ್ರೈವ್‍ಗಳ ಹರಡುವಿಕೆಯನ್ನು ತಡೆ ಹಿಡಿಯಬೇಕು. ಸಂತ್ರಸ್ತ ಹೆಣ್ಣು ಮಕ್ಕಳು ಆತ್ಮಹತ್ಯೆಗೆ ಶರಣಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಪ್ರಕರಣದಲ್ಲಿ ಕೇಳಿಬಂದಿರುವ ವ್ಯಕ್ತಿ ಮತ್ತು ಪೆನ್‍ಡ್ರೈವ್ ಹರಡುವುದಕ್ಕೆ ಕಾರಣರಾಗಿರುವವರನ್ನು ಕೂಡಲೇ ಬಂಧಿಸಬೇಕು. ಈ ಸಂಬಂಧ ಸರಕಾರ ತನಿಖೆ ನಡೆಸಬೇಕು’

ಜ್ಯೋತಿ ರಾಜ್ಯಾಧ್ಯಕ್ಷೆ, ಭಾರತೀಯ ಮಹಿಳೆಯರ ರಾಷ್ಟ್ರೀಯ ಒಕ್ಕೂಟ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News