ಬೆಂಗಳೂರಿನಲ್ಲಿ ನಿರಂತರ ಮಳೆಯಿಂದ ಜನಜೀವನ ಅಸ್ತವ್ಯಸ್ತ
ಬೆಂಗಳೂರು : ನಗರದಲ್ಲಿ ವಾರದಿಂದ ಬಿಟ್ಟು ಬಿಡದೇ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಲ ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ರಸ್ತೆಗುಂಡಿಗಳಲ್ಲಿ ನೀರು ನಿಂತಿದ್ದು, ವಾಹನ ಸವಾರರು ಪರದಾಡುವಂತೆ ಮಾಡಿದೆ.
ಕೆಆರ್ ಪುರಂ ವಿಧಾನಸಭಾ ಕ್ಷೇತ್ರದ ಹೊರಮಾವು ವಾರ್ಡಿನ ಸಾಯಿಬಾಬಾ ಲೇಔಟ್ ಪ್ರತಿವರ್ಷದ ಮಳೆಗಾಲದಲ್ಲಿ ಜಲಾವೃತವಾಗುತ್ತಿದ್ದು, ನಿರಂತರ ಮಳೆಯಿಂದ ಈ ಬಾರಿ ಮತ್ತೆ ಜಲಾವೃತಗೊಂಡಿದೆ. ಭಾರೀ ಮಳೆಯಿಂದಾಗಿ ಜಲಾವೃತಗೊಂಡಿದ್ದ ಲೇಔಟ್‍ನಲ್ಲಿ ಶುಕ್ರವಾರವಷ್ಟೇ ಫೈರ್ ಇಂಜಿನ್ ಮೂಲಕ ನೀರನ್ನು ಹೊರ ಹಾಕಲಾಗಿತ್ತು. ಈಗ ಮತ್ತೊಮ್ಮೆ ಲೇಔಟ್ ಜಲಾವೃತಗೊಂಡಿದ್ದು, ಜನ ಹೈರಾಣಾಗಿದ್ದಾರೆ.
ಬಿಡಿಎಯಿಂದ ಯಾವುದೇ ಅನುಮತಿಯಿಲ್ಲದೆ ಅಕ್ರಮವಾಗಿ ಲೇಔಟ್ ಅಭಿವೃದ್ಧಿಪಡಿಸಲಾಗಿದೆ. ಹೀಗಾಗಿ ಲೇಔಟ್ ಜಲಾವೃತವಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಲೇಔಟ್‍ನಲ್ಲಿ ರೈಲ್ವೆ ಸೇತುವೆಯ ಕೆಳಗೆ ಅಭಿವೃದ್ಧಿ ಕಾಮಗಾರಿಯನ್ನು ಕಾರ್ಯಗತಗೊಳಿಸಲಾಗುತ್ತಿದೆ. ಪ್ರಸ್ತುತ, ಮಳೆ ನೀರು ಚರಂಡಿಯು ಕೇವಲ 20 ಅಡಿ ಅಗಲದ ಪ್ರದೇಶವನ್ನು ಹೊಂದಿದ್ದು, ಮಳೆಯ ಸಮಯದಲ್ಲಿ ಹೆಬ್ಬಾಳ-ನಾಗವಾರ ಮೇಲ್ಭಾಗದಿಂದ ನೀರು ಹರಿದು ಬಂದಾಗ ಪ್ರವಾಹ ಪರಿಸ್ಥಿತಿ ಎದುರಾಗುತ್ತಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಇನ್ನು ಶನಿವಾರ ತಡರಾತ್ರಿಯಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ನಗರ ತತ್ತರಿಸಿದೆ. ತಗ್ಗು ಪ್ರದೇಶಗಳು, ಹಲವಾರು ಬಡಾವಣೆಗಳು ಜಲಾವೃತವಾಗಿವೆ. ಸತತ 6ರಿಂದ 8 ಗಂಟೆಗಳ ಕಾಲ ಮಳೆ ಎಡಬಿಡದೆ ಸುರಿದಿದೆ. ಹಲವು ಕಡೆ ಗುಡುಗು ಸಹಿತ ಭಾರಿ ಮಳೆಯಾಗಿದೆ.
ಶಾಂತಿನಗರ, ಜಯನಗರ, ತ್ಯಾಗರಾಜನಗರ, ರಾಜರಾಜೇಶ್ವರಿ ನಗರ, ಶ್ರೀನಗರ, ಕೆ.ಆರ್. ಮಾರ್ಕೆಟ್, ಟೌನ್‍ಹಾಲ್, ಕಾರ್ಪೊರೇಷನ್ ಸರ್ಕಲ್, ಮೈಸೂರು ರಸ್ತೆ, ವಿಜಯನಗರ, ಮಾಗಡಿ ರಸ್ತೆ, ರಾಜಾಜಿನಗರ, ಮಲ್ಲೇಶ್ವರಂ, ಯಶವಂತಪುರ, ಜಾಲಹಳ್ಳಿ, ಪೀಣ್ಯ, ಹೆಬ್ಬಾಳ, ಯಲಹಂಕ ಸೇರಿದಂತೆ ಬಹುತೇಕ ಕಡೆಗಳಲ್ಲಿ ಧಾರಾಕಾರ ಮಳೆಯಾಗಿದೆ. ಎಚ್‍ಎಎಲ್‍ನಲ್ಲಿ 12 ಎಂ.ಎಂ. ಮಳೆಯಾಗಿದೆ.
ಮಹದೇವಪುರ, ಬೆಳ್ಳಂದೂರು, ಮಾರತ್ತಹಳ್ಳಿ, ಕಾಡುಬೀಸನಹಳ್ಳಿ, ಸಿಲ್ಕ್ ಬೋರ್ಡ್, ಬಿಟಿಎಂ ಲೇಔಟ್ ನಲ್ಲಿ ಭಾರೀ ಮಳೆಯಾಗಿದೆ. ಜೆ.ಪಿ.ನಗರ, ಬನಶಂಕರಿ, ಕತ್ರಿಗುಪ್ಪೆ, ಪದ್ಮನಾಭನಗರ, ನಾಯಂಡಹಳ್ಳಿ, ಕೆಂಗೇರಿ, ನಾಗರಬಾವಿ, ಕೋಣನಕುಂಟೆ, ತಲಘಟ್ಟಪುರ ಸೇರಿದಂತೆ ಹಲವಾರು ಕಡೆಗಳಲ್ಲಿ ಮಳೆಯಾಗಿದೆ.
ಮೈಸೂರು ರಸ್ತೆಯುದ್ದಕ್ಕೂ ಕಾರ್ ಶೋ ರೂಂಗಳಿವೆ. ರಾಜಕಾಲುವೆಗೆ ನೀರು ಹರಿಯಲಾಗದೆ ನೀರು ಕಾರ್ ಶೋ ರೂಂಗಳಿಗೆ ನುಗ್ಗಿ ನಷ್ಟ ಉಂಟಾಗಿದೆ. ಹೊಸ ಹೊಸ ಕಾರುಗಳ ಒಳಗೆ ನೀರು ತುಂಬಿಕೊಂಡಿದೆ. ರಾಜರಾಜೇಶ್ವರಿ ನಗರದ ಬೆಮೆಲ್ ಲೇಔಟ್, ಪಟ್ಟಣಗೆರೆ, ಗ್ಲೋಬಲ್ ಟೆಕ್ ಪಾರ್ಕ್ ಸುತ್ತಮುತ್ತ ನೀರು ನಿಂತಿದ್ದು ವಾಹನಗಳು ಸಂಚರಿಸಲು ಸಾಧ್ಯವಾಗುತ್ತಿಲ್ಲ. ಅಪಾರ್ಟ್ ಮೆಂಟ್‍ಗಳ ಒಳಗೆ ನೀರು ನುಗ್ಗಿ ಕಾರು ಪಾಕಿರ್ಕಿಂಗ್ ಜಾಗ ನೀರಿನಿಂದ ತುಂಬಿಕೊಂಡಿವೆ. ಕಾರುಗಳು ಮುಳುಗಡೆಯಾಗಿವೆ.
ಪರಪ್ಪನ ಅಗ್ರಹಾರ ಸರ್ಜಾಪುರ ರಸ್ತೆಯುದ್ದಕ್ಕೂ ನೀರು ಹರಿಯುತ್ತಿದೆ. ಚರಂಡಿ, ರಸ್ತೆ, ರಸ್ತೆ ಗುಂಡಿ ಯಾವುದೂ ಕಾಣಿಸಿಕೊಳ್ಳದೆ ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಳ್ಳುತ್ತಿದ್ದಾರೆ. ಸಿಲ್ಕ್ ಬೋರ್ಡ್ ಜಂಕ್ಷನ್ ನಲ್ಲಿ ರಸ್ತೆಯಲ್ಲಿ ನೀರು ಹರಿಯುತ್ತಿದ್ದು, ಮುಂದೆ ಹೋಗಲಾಗದೆ ವಾಹನಗಳು ರಸ್ತೆಯಲ್ಲೇ ನಿಲ್ಲುವಂತಾಗಿದೆ.
ನಗರದ ಹಳೆಯ ಬಡಾವಣೆಗಳು, ಗಲ್ಲಿ ಗಲ್ಲಿಗಳಲ್ಲಿ ನೀರು ಮುಂದಕ್ಕೆ ಹರಿಯಲಾಗುತ್ತಿಲ್ಲ. ಇಂತಹ ಬಡಾವಣೆಗಳಲ್ಲಿ ಮನೆಗಳಿಗಿಂತ ರಸ್ತೆ ಮೇಲಿದ್ದು ರಸ್ತೆಯ ನೀರು ಮನೆಯೊಳಗೆ ಪ್ರವೇಶಿಸುತ್ತಿದೆ. ನಿವಾಸಿಗಳು ಸ್ಥಳೀಯ ಶಾಸಕರು, ಪಾಲಿಕೆ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.