ಆನ್‌ಲೈನ್ ಪಾವತಿಗಳನ್ನು ಯಾಕೆ ಸ್ವೀಕರಿಸುತ್ತಿಲ್ಲ ಎಂಬ ಬಗ್ಗೆ ಪ್ರಮಾಣಪತ್ರ ಸಲ್ಲಿಸಿ : ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಹೈಕೋರ್ಟ್ ನಿರ್ದೇಶನ
ಬೆಂಗಳೂರು: ಇಡೀ ಜಗತ್ತು ಡಿಜಿಟಲೀಕರಣ ಆಗಿರುವಾಗ, ನೀವು ಮಾತ್ರ ಆನ್‌ಲೈನ್ ಪಾವತಿಗಳನ್ನು ಯಾಕೆ ಸ್ವೀಕರಿಸುತ್ತಿಲ್ಲ’ ಎಂಬ ಬಗ್ಗೆ ಪ್ರಮಾಣಪತ್ರ ಸಲ್ಲಿಸುವಂತೆ ಬೆಂಗಳೂರು ವಿದ್ಯುತ್ ಸರಬರಾಜು ನಿಗಮ (ಬೆಸ್ಕಾಂ) ವ್ಯವಸ್ಥಾಪಕ ನಿರ್ದೇಶಕರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ವಿದ್ಯುತ್ ಸರಬರಾಜು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ತಿರಸ್ಕರಿಸಿ ಹಾಗೂ ಪ್ರೀಪೆಡ್ ಮೀಟರ್ ಕೊಡಲು ನಿರಾಕರಿಸಿ ಬೆಸ್ಕಾಂ ಹೊಸಕೋಟೆ ವೃತ್ತದ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ 2024ರ ಮೇ 8ರಂದು ಹೊರಡಿಸಿದ ಆದೇಶವನ್ನು ರದ್ದುಪಡಿಸಬೇಕು ಎಂದು ಕೋರಿ ಹೊಸಕೋಟೆ ನಿವಾಸಿ ಸೀತಾಲಕ್ಷ್ಮೀ ಎಂಬವರು ಸಲ್ಲಿಸಿದ ತಕರಾರು ಅರ್ಜಿಯನ್ನು ನ್ಯಾಯಮೂರ್ತಿ ಎನ್.ಎಸ್.ಸಂಜಯಗೌಡ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠ, ಆನ್‌ಲೈನ್ ಪಾವತಿಗಳನ್ನು ಯಾಕೆ ಸ್ವೀಕರಿಸುತ್ತಿಲ್ಲ ಎಂಬ ಬಗ್ಗೆ ಪ್ರಮಾಣಪತ್ರ ಸಲ್ಲಿಸುವಂತೆ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿ ವಿಚಾರಣೆಯನ್ನು ಆಗಸ್ಟ್ 9ಕ್ಕೆ ಮುಂದೂಡಿತು. ಅರ್ಜಿದಾರರ ಪರ ಹಿರಿಯ ವಕೀಲ ಶ್ರೀಧರ ಪ್ರಭು ವಾದ ಮಂಡಿಸಿದರು.