ಶಿರೂರು ಗುಡ್ಡ ಕುಸಿತ ಪ್ರಕರಣ | ರಕ್ಷಣಾ ಕಾರ್ಯ ಸ್ಥಗಿತ, ಹೈಕೋರ್ಟ್‌ಗೆ ಸರ್ಕಾರ ಮಾಹಿತಿ

Update: 2024-08-21 18:06 GMT

ಬೆಂಗಳೂರು : ಉತ್ತರ ಕನ್ನಡ ಜಿಲ್ಲೆಯ ಶಿರೂರಿನ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಸಂಭವಿಸಿರುವ ಗುಡ್ಡ ಕುಸಿತ ಘಟನೆಯಲ್ಲಿ ಇನ್ನೂ ನಾಪತ್ತೆಯಾದವರ ಹುಡುಕಾಟ ಹಾಗೂ ಇತರೆ ರಕ್ಷಣಾ ಕಾರ್ಯವನ್ನು ಸದ್ಯ ಸ್ಥಗಿತ ಗೊಳಿಸಲಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ವಕೀಲ ಸಿ.ಜಿ.ಮಲೈಯಿಲ್ ಹಾಗೂ ಕೆ.ಎಸ್. ಸುಭಾಷ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾ. ಕೆ.ವಿ.ಅರವಿಂದ್ ಅವರಿದ್ದ ವಿಭಾಗೀಯ ಪೀಠ‌ ವಿಚಾರಣೆ ನಡೆಸಿತು.

ಈ ವೇಳೆ ರಾಜ್ಯ ಸರ್ಕಾರದ ಪರ ಹಾಜರಾದ ಅಡ್ವೋಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ, ಪ್ರಕರಣದಲ್ಲಿ ಮಣ್ಣಿನಡಿ ಸಿಲುಕಿದ್ದ 11 ಜನರ ಪೈಕಿ 8 ಜನರ ಮೃತದೆಹಗಳನ್ನು ಪತ್ತೆಹಚ್ಚಿ ಹೊರತೆಗೆಯಲಾಗಿದ್ದು, ಇನ್ನೂ ಮೂವರ ಮೃತದೇಹ ಪತ್ತೆೆಯಾಗಬೇಕಿದೆ. ಆದರೆ, ನದಿಯಲ್ಲಿ ನೀರಿನ ಪ್ರಮಾಣ ಹಾಗೂ ರಭಸ ಹೆಚ್ಚಾಗಿರುವುದರ ಜೊತೆಗೆ ಸ್ಥಳೀಯವಾಗಿ ಪ್ರತಿಕೂಲ ಸಂದರ್ಭಗಳು ಎದುರಾಗಿದೆ. ಹಿನ್ನೆಲೆಯಲ್ಲಿ ಆಗಸ್ಟ್‌ 16ರಿಂದ ರಕ್ಷಣಾ ಕಾರ್ಯ ಸ್ಥಗಿತಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇದಕ್ಕೆ ಆಕ್ಷೇಪಿಸಿದ ಅರ್ಜಿದಾರರ ಪರ ವಕೀಲರು, ರಕ್ಷಣಾ ಕಾರ್ಯ ಮುಂದುವರಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು. ಅಲ್ಲದೇ ಸರ್ಕಾರ ಸ್ಥಳೀಯ ಈಜುಗಾರ ಈಶ್ವರ್ ಮಲ್ಪೆ ನೆರವು ಪಡೆದುಕೊಳ್ಳುತ್ತಿಲ್ಲ. ಘಟನಾ ಸ್ಥಳದ ಬಳಿ ಬರುವುದಕ್ಕೂ ಆಕ್ಷೇಪಿಸಲಾಗುತ್ತಿದೆ, ಪೊಲೀಸರು ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

ಇದನ್ನು ಅಲ್ಲಗಳೆದ ಅಡ್ವೋಕೇಟ್ ಜನರಲ್, ಅರ್ಜಿದಾರರ ಪರ ವಕೀಲರು ಒಬ್ಬ ವ್ಯಕ್ತಿಯ ಬಗ್ಗೆ ಮಾತನಾಡುತ್ತಿದ್ದಾಾರೆ. ಆದರೆ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಸೇನೆಯ ಸಿಬ್ಬಂದಿ ಸೇರಿ 171 ಜನ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಮನುಷ್ಯ ಸಾಧ್ಯ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಗಿದೆ ಎಂದರು.

ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್, ನದಿಯಲ್ಲಿ  ನೀರಿನ ಪ್ರವಾಹ ವೇಗ 2 ನಾಸ್ಟ್‌ ಇದ್ದರಷ್ಟೇ ರಕ್ಷಣಾ ಕಾರ್ಯ ನಡೆಸಬಹುದು. ಆದರೆ, ಪ್ರವಾಹ ವೇಗ 7 ನಾಸ್ಟ್‌ ಇದೆ.ಹೀಗಾಗಿ ರಕ್ಷಣೆ ಕಾರ್ಯ ಕಷ್ಟ ಎಂದು‌ ತಿಳಿಸಿದರು. ವಾದ ಪ್ರತಿವಾದ ಆಲಿಸಿದ ಪೀಠ ವಿಚಾರಣೆ ಮುಂದೂಡಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News