ಗಾಂಧಿ ಭಾವಚಿತ್ರಗಳಿರುವ ಕಡೆಯೇ ದರೋಡೆಕೋರರು ಹೆಚ್ಚಾಗಿದ್ದಾರೆ : ಸಚಿವ ಎಚ್.ಕೆ.ಪಾಟೀಲ್ ಬೇಸರ

Update: 2024-08-25 16:22 GMT

ಬೆಂಗಳೂರು : ಗಾಂಧೀಜಿ ಭಾವಚಿತ್ರಗಳು ಹೆಚ್ಚಾಗಿರುವ ಕಡೆಗಳಲ್ಲಿಯೇ ದರೋಡೆಕೋರರು ಹೆಚ್ಚಾಗಿದ್ದಾರೆ ಎಂದರೆ ತಪ್ಪಾಗಲಾರದು. ಒಂದು ಕಾಲದಲ್ಲಿ ಲಂಚ ತೆಗೆದುಕೊಂಡು ಕೆಲಸ ಮಾಡಿಕೊಡುತ್ತಿದ್ದರು. ಇಂದು ಭ್ರಷ್ಟಾಚಾರದ ಸ್ವರೂಪ ಬದಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆಯ ಸಚಿವ ಎಚ್.ಕೆ.ಪಾಟೀಲ್ ಬೇಸರ ವ್ಯಕ್ತಪಡಿಸಿದ್ದಾರೆ.

ರವಿವಾರ ನಗರದ ಗಾಂಧಿ ಭವನದಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ವತಿಯಿಂದ ನಡೆದ ‘21ನೇ ಶತಮಾನಕ್ಕೆ ಮಹಾತ್ಮ ಗಾಂಧೀಜಿ’ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಇಂದು ಭ್ರಷ್ಟಾಚಾರದ ಸ್ವರೂಪ ಬದಲಾಗಿದ್ದು, ಸರಕಾರದ ಬ್ಯಾಂಕ್ ಖಾತೆಯಿಂದ ನೇರವಾಗಿ ತಮ್ಮ ಸಹೋದರರು, ಪುತ್ರರು, ಸಂಬಂಧಿಕರು, ಸ್ನೇಹಿತರ ಖಾತೆಗೆ ದುಡ್ಡು ಹೋಗುವ ಕಾಲಕ್ಕೆ ಬಂದಿದ್ದೇವೆ. ಗಾಂಧಿ ಸ್ಮಾರಕ ನಿಧಿ ಶಕ್ತಿಯಾಗಿ ಹೊರ ಹೊಮ್ಮಬೇಕು ಎಂದರು.

ಸಬರಮತಿ ಆಶ್ರಮದ ಆಸ್ತಿ ರಕ್ಷಣೆ ಮಾಡಲು ನಾವೆಲ್ಲರೂ ಬದ್ಧರಾಗಿರಬೇಕು. ಗಾಂಧಿ ಸಂಸ್ಥೆಗಳ ಆಸ್ತಿಯನ್ನು ರಕ್ಷಣೆ ಮಾಡಲು ವಿಶೇಷವಾಗಿರುವ ಕಾನೂನುಗಳು ಬರಬೇಕು. ಖಾದಿ ಗ್ರಾಮೋದ್ಯೋಗ, ಭೂದಾನದಿಂದ ಬಂದಿರುವ ಆಸ್ತಿಗಳನ್ನು ರಕ್ಷಣೆ ಮಾಡುವ ಅಗತ್ಯವಿದೆ ಎಂದು ಅವರು ತಿಳಿಸಿದರು.

ಸುಪ್ರೀಂಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಮಾತನಾಡಿ, ಹಿಂದಿನ ಹಲವು ದಶಕಗಳಲ್ಲಿ ದೇಶದಲ್ಲಿ ಸಾಕಷ್ಟು ಹಗರಣಗಳು ನಡೆದಿವೆ. ಇಲ್ಲಿ ಕೋಟಿಗಟ್ಟಲೆ ಸಾರ್ವಜನಿಕರ ಹಣ ಲೂಟಿಯಾಗಿದೆ. ಭ್ರ‌ಷ್ಟಾಚಾರದ ನಿಯಂತ್ರಣಕ್ಕೆ ಮುಂದಾಗಬೇಕು ಎಂದರು.

ಸಮಾಜದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಗಳಿಗೆ ದುರಾಸೆಯೇ ಮೂಲ ಕಾರಣ. ಇದನ್ನು ಮಟ್ಟಹಾಕಲು ಮಹಾತ್ಮ ಗಾಂಧಿ ಹೇಳಿದ ಒಂದೇ ದಾರಿ ತೃಪ್ತಿ. ದುರಾಸೆ ಇದ್ದರೆ ಸಮಾಜದಲ್ಲಿ ಶಾಂತಿ ಸೌಹಾರ್ದತೆಯಿಂದ ಇರಲು ಸಾಧ್ಯವಿಲ್ಲ ಎಂದು ಸಂತೋಷ್ ಹೆಗ್ಡೆ ಹೇಳಿದರು.

ಕಾರ್ಯಕ್ರಮದಲ್ಲಿ ಹೊಸದಿಲ್ಲಿಯ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ರಾಮಚಂದ್ರ ರಾಹಿ, ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ಡಾ.ವೊಡೇ ಪಿ.ಕೃಷ್ಣ ಸೇರಿ ಹಲವರು ಉಪಸ್ಥಿತರಿದ್ದರು.

¥

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News