ನಾಲಿಗೆ ಬಿಗಿ ಹಿಡಿದು ಮಾತನಾಡುವ ಜವಾಬ್ದಾರಿ ಮೋದಿಯವರ ಮೇಲಿದೆ : ಎಚ್.ಕೆ.ಪಾಟೀಲ್

Update: 2024-11-03 18:16 IST
Photo of HK Patil

ಎಚ್.ಕೆ.ಪಾಟೀಲ್

  • whatsapp icon

ಬೆಂಗಳೂರು : ಪ್ರಧಾನಿ ಹುದ್ದೆಗೆ ಒಂದು ಘನತೆಯಿದ್ದು, ನಾಲಿಗೆ ಬಿಗಿ ಹಿಡಿದು ಮಾತನಾಡುವ ದೊಡ್ಡ ಜವಾಬ್ದಾರಿ ಮೋದಿಯವರ ಮೇಲಿದೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.

ರಾಜ್ಯದ ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಸರಣಿ ಎಕ್ಸ್ ಪೋಸ್ಟ್ ವಿಚಾರವಾಗಿ ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ಪ್ರಜಾಪ್ರಭುತ್ವದ ಯಶಸ್ಸಿಗೆ ಒಕ್ಕೂಟ ವ್ಯವಸ್ಥೆ ಕಾರಣ. ಒಕ್ಕೂಟ ವ್ಯವಸ್ಥೆಯನ್ನೇ ಅಶಕ್ತಗೊಳಿಸುವ ನಿಟ್ಟಿನಲ್ಲಿ ಮೋದಿ ಅವರು ಹೇಳಿಕೆ ಕೊಟ್ಟಿದ್ದಾರೆ ಎಂದು ದೂರಿದರು.

ಕರ್ನಾಟಕದ ಬಗ್ಗೆ ಹೇಳಿಕೆ ಕೊಡೋದು ಸರಿನಾ?. ನ್ಯಾಯಬದ್ಧವಾಗಿ ಬರಬೇಕಾದ ಬರ ಪರಿಹಾರ ಕೊಡಲಿಲ್ಲ. ನಾಲಿಗೆ ಬಿಗಿ ಹಿಡಿದು ಮಾತನಾಡುವ ದೊಡ್ಡ ಜವಾಬ್ದಾರಿ ಮೋದಿಯವರ ಮೇಲಿದೆ ಎಂದು ಎಚ್.ಕೆ.ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.

ಸುಪ್ರಿಂ ಕೋರ್ಟ್‍ಗೆ ಹೋಗಿ ನಮ್ಮ ಪಾಲಿನ ತೆರಿಗೆ ಪಡೆಯಬೇಕಾಯಿತು. ಇದು ನಿಮ್ಮ ರೀತಿ ನೀತಿ. ಗ್ಯಾರಂಟಿಗಳನ್ನು ಸಹಿಸದೆ ಸಂಕಟ ಬಿದ್ದು ಮಾತನಾಡಿದರೆ ಹೇಗೆ..?. ತಪ್ಪು ಮಾಡಿದಾಗ ಮೋದಿಯವರಿಗೂ ಬುದ್ಧಿಮಾತು ಹೇಳಬೇಕಾಗುತ್ತದೆ. ಬುದ್ಧಿ ಹೇಳಿಸಿಕೊಳ್ಳುವ ಹಂತಕ್ಕೆ ಮೋದಿ ಬಂದಿದ್ದಾರೆ. ಮೋದಿ ಗ್ಯಾರಂಟಿ ಬದಲು ಕರ್ನಾಟಕ ಗ್ಯಾರೆಂಟಿ ಚರ್ಚೆ ಆಗುತ್ತಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.

ಗ್ಯಾರಂಟಿ ಕುರಿತು ಲಘುವಾಗಿ ಮಾತನಾಡುವುದು ಸರಿಯಲ್ಲಿ. ನಾವು ಅಧಿಕಾರಕ್ಕೆ ಬಂದ ಬಳಿಕ ಗ್ಯಾರಂಟಿ ಜಾರಿ ಮಾಡಿದ್ದೇವೆ. ಸುಮಾರು ಒಂದೂ ಕೋಟಿಗೂ ಹೆಚ್ಚು ಮಂದಿ ಯೋಜನೆಗಳ ಫಲಾನುಭವಿಗಳಿದ್ದಾರೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.

ವಕ್ಫ್ ಆಸ್ತಿ ರಾಷ್ಟ್ರೀಕರಣಕ್ಕಾಗಿ ಶಾಸಕ ಯತ್ನಾಳ್ ಅವರು ಪ್ರಧಾನಿಗೆ ಪತ್ರ ಬರೆದಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಎಚ್.ಕೆ.ಪಾಟೀಲ್, ವಕ್ಫ್ ಬೋರ್ಡ್ ಅಂದರೆ ಸರಕಾರದ ಒಂದು ಭಾಗ. ಇಷ್ಟು ದಿನ ವಕ್ಫ್ ಬೋರ್ಡ್ ಕಾಣಿಸಲಿಲ್ಲವೇ? ಈಗ ಚುನಾವಣೆ ಬಂದಿದೆ, ಜನರ ಭಾವನೆಗಳನ್ನು ಕೆರಳಿಸಲು ಈ ರೀತಿ ಮಾಡುತ್ತಿದ್ದೀರಾ ಎಂದು ಎಚ್.ಕೆ.ಪಾಟೀಲ್ ವಾಗ್ದಾಳಿ ನಡೆಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News