ಶೋಷಣೆ ನಡೆದರೆ ಪ್ರಶ್ನಿಸುವ ಗುಣ ಬೆಳಸಿಕೊಳ್ಳಬೇಕು : ಎಚ್.ಕೆ.ಪಾಟೀಲ್

Update: 2024-11-26 16:19 GMT

ಬೆಂಗಳೂರು : ಸಂವಿಧಾನಕ್ಕೆ ಗೌರವ ನೀಡುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದ್ದು, ಸಂವಿಧಾನದ ವಿರುದ್ಧವಾಗಿ ಯಾವುದೇ ಶೋಷಣೆ ನಡೆದರೆ ಪ್ರಶ್ನಿಸುವ ಗುಣ ಬೆಳಸಿಕೊಳ್ಳಬೇಕು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಕರೆ ನೀಡಿದ್ದಾರೆ.

ಮಂಗಳವಾರ ಇಲ್ಲಿನ ರೇಣುಕಾಚಾರ್ಯ ಕಾನೂನು ಕಾಲೇಜಿನ ‘ಬಸಪ್ಪ ಸಭಾಂಗಣ’ದಲ್ಲಿ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯು ‘ಸಂವಿಧಾನ ದಿನಾಚರಣೆ’ಯ ಅಂಗವಾಗಿ ಆಯೋಜಿಸಿದ್ದ ‘ಸಂವಿಧಾನ ಸೈನಿಕರ ಸಮಾವೇಶ 2024’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಂವಿಧಾನ ತಿದ್ದುಪಡಿ ಮಾಡುವ ಮೂಲಕ ಸಮಾಜವಾದ ಮತ್ತು ಜಾತ್ಯಾತೀತತೆ ಪದಗಳನ್ನು ಪೀಠಿಕೆಯಲ್ಲಿ ಸೇರಿಸಿದ್ದೇವೆ. ಅವುಗಳ ಬಗ್ಗೆ ಸುಪ್ರೀಂ ಕೋರ್ಟಿ ನಿನ್ನೆ ಪ್ರಕಟಿಸಿದ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. ಸುಪ್ರೀಂ ಕೋರ್ಟ್ ಸಮಾಜವಾದ, ಜಾತ್ಯಾತೀತತೆಯ ಜೊತೆಗೆ ಸರ್ವಧರ್ಮ ಶ್ರೇಷ್ಠತೆಯನ್ನು ಗೌರವಿಸಿದೆ. ಸಮಾಜವಾದ ಎನ್ನುವ ಪದ ಕೇವಲ ಚುನಾವಣಾ ಸಂದರ್ಭಕ್ಕೆ ಬಳಕೆಯಾಗುವ ಪದವಾಗಬಾರದು ಎಂದು ಅವರು ತಿಳಿಸಿದರು.

ದೇಶದ ಯುವಕರು ಸಂವಿಧಾನದ ಬಗ್ಗೆ ಬಹಳಷ್ಟು ಚಿಂತನೆ ಮಾಡುವ ಅವಶ್ಯಕತೆ ಇದೆ. ಸಂವಿಧಾನದ ಸೈನಿಕರಾಗಿ ಪ್ರತಿ ಹೆಜ್ಜೆಯಲ್ಲೂ ಹೋರಾಟ ಮಾಡಬೇಕಾಗಿದೆ. ನಾಡಿನಲ್ಲಿ ಅನೇಕ ಜ್ವ್ವಲಂತ ಸಮಸ್ಯೆಗಳಿದ್ದು, ಅವುಗಳ ಬಗ್ಗೆ ಹೆಚ್ಚು ಚರ್ಚೆಯಾಗಬೇಕು. ಯುವಕರ ಜೊತೆಗೆ ಚರ್ಚೆ ಆಗಲಿ, ಈ ನಿಟ್ಟಿನಲ್ಲಿ ನಮ್ಮ ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ ಕೆಲಸ ಮಾಡಲಿದೆ ಎಂದು ಅವರು ತಿಳಿಸಿದರು.

ವಕೀಲಿಕೆಯ ಅಧಿಕಾರವನ್ನು ಬಳಸಿ ಸಂವಿಧಾನದ ಮೂಲಕ ಸಮಸ್ಯೆ ವಿರುದ್ಧ ಹೋರಾಡಿ ಶೋಷಣೆಗೆ ಲಗಾಮು ಹಾಕಬೇಕು. ಸಂವಿಧಾನದಲ್ಲಿ ಶಕ್ತಿಯುತವಾದ ಅನುಚ್ಛೇದಗಳಿವೆ. ಈ ಒಂದು ಸಂವಿಧಾನ ಸೈನಿಕರ ಸಮಾವೇಶದಿಂದ ನಾಡಿನಲ್ಲಿ ಹೊಸ ಭರವಸೆ ಮೂಡಬೇಕು. ಇದನ್ನು ಒಂದು ಅಸ್ತ್ರವನ್ನಾಗಿ ನೀವು ಬಳಸಿಕೊಳ್ಳಬೇಕು. ಇದನ್ನು ಉಪಯೋಗಿಸಿ ಉತ್ತಮ ಸರಕಾರ ಮಾಡುವ ರೀತಿ ಸಂವಿಧಾನ ಸೈನಿಕರು ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಸುಪ್ರೀಂಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ಶಿವರಾಜ ವಿ.ಪಾಟೀಲ ಮಾತನಾಡಿ, ಪ್ರಜಾಪ್ರಭುತ್ವ ಇರುವ ರಾಷ್ಟ್ರಗಳಲ್ಲಿನ ಸಂವಿಧಾನದಲ್ಲಿ ನಮ್ಮ ಸಂವಿಧಾನವೇ ಬಹಳ ಶ್ರೇಷ್ಠವಾಗಿದೆ. ಸಂವಿಧಾನಕ್ಕೆ 75 ವರ್ಷ ತುಂಬಿರುವುದು ಒಂದು ದೊಡ್ಡ ಸಾಧನೆಯಾಗಿದೆ. ಸಂವಿಧಾನದ ಧ್ಯೇಯೋದ್ದೇಶಗಳು ಎಲ್ಲರಿಗೂ ಸಮಾನವಾಗಿದ್ದು, ಕಾನೂನು ವಿದ್ಯಾರ್ಥಿಗಳು ಸಂವಿಧಾನ ರಚನಾ ಸಭೆಯ ನಡಾವಳಿಗಳನ್ನು ಓದಿ ಮತ್ತು ಚರ್ಚೆ ಮಾಡಿ ಅಳವಡಿಸಿಕೊಳ್ಳಬೇಕು ಕರೆ ನೀಡಿದರು.

ಕೆಲ ರಾಷ್ಟ್ರಗಳು ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿವೆ. ಇಂತಹ ಸಂದರ್ಭದಲ್ಲಿ ನಾವು 75 ವರ್ಷಗಳನ್ನು ದಾಟಿದ್ದೇವೆ. ವರ್ಷದಿಂದ ವರ್ಷಕ್ಕೆ ಪ್ರಬುದ್ಧರಾಗುತ್ತಿದ್ದೇವೆ. ಸಂವಿಧಾನವು ನಮ್ಮ ಆಕರ ಗ್ರಂಥವೇ ಹೊರತು ಇದೊಂದು ಪುಸ್ತಕವಲ್ಲ. ಆಡಳಿತ, ನ್ಯಾಯಾಂಗ ಹಾಗೂ ಶಾಸನಸಭೆಗಳ ಕಾರ್ಯನಿರ್ವಹಣೆಗೆ ಇದೊಂದು ಮಾರ್ಗದರ್ಶನ ಕೃತಿ ಎಂದು ಹೇಳಿದರು.

ಸಮಾರಂಭದಲ್ಲಿ ಸಂಸ್ಥೆಯ ನಿರ್ದೇಶಕ ಪ್ರೊ.ಸಿ.ಎಸ್.ಪಾಟೀಲ, ರೇಣುಕಾಚಾರ್ಯ ಕಾನೂನು ಕಾಲೇಜಿನ ಪ್ರಾಂಶುಪಾಲೆ ಜ್ಯೋತಿ, ಸಹಾಯಕ ಪ್ರಾಧ್ಯಾಪಕಿ ರಾಧಿಕಾ ಕೇರಿಹೊಳ್ಳ, ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯ ಸಂಶೋಧನಾ ಮುಖ್ಯಸ್ಥ ಡಾ.ರೇವಯ್ಯ ಒಡೆಯರ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News