ಹೊಯ್ಸಳ, ಪೊಲೀಸ್ ಜೀಪ್ ಗಳಿಗೆ ‘ಡ್ಯಾಷ್ ಕ್ಯಾಮರಾ ಅಳವಡಿಕೆ’ :‌ ಪೊಲೀಸ್ ಆಯುಕ್ತ ಬಿ.ದಯಾನಂದ್

Update: 2024-04-05 16:20 GMT

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಪಾರದರ್ಶಕತೆ ತರಲು ಹಾಗೂ ಪೊಲೀಸರ ಕಾರ್ಯದಕ್ಷತೆ ಹೆಚ್ಚಿಸಲು ನಗರ ಪೊಲೀಸರಿಗೆ ಬಾಡಿವೋರ್ನ್ ಕ್ಯಾಮೆರಾದಂತೆ ಹೊಯ್ಸಳ ವಾಹನ ಹಾಗೂ ಪೊಲೀಸ್ ಜೀಪ್ ಗಳಲ್ಲಿ ‘ಡ್ಯಾಷ್ ಕ್ಯಾಮರಾ ಅಳವಡಿಸಲಾಗುತ್ತಿದೆ’ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.

ಶುಕ್ರವಾರ ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ‘ನಗರದಲ್ಲಿರುವ 241 ಹೊಯ್ಸಳ ಹಾಗೂ ಎಸಿಪಿ ಹಾಗೂ ಇನ್ಸ್ಪೆಕ್ಟ‌ರ್ ಗಳು ಬಳಸುವ ಪೊಲೀಸ್ ಜೀಪ್‌ ಗಳಲ್ಲಿ ಒಟ್ಟು 500 ಡ್ಯಾಷ್ ಕ್ಯಾಮರಾ ಅಳವಡಿಸಲಾಗುತ್ತಿದೆ. ಚಾಲಕ ಸೀಟಿನ ಒಳಗೆ ಹಾಗೂ ಹೊರಗೆ ಎರಡು ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಸೇಫ್ ಸಿಟಿ ಯೋಜನೆ ಅನುದಾನದಡಿ 241 ಹೊಯ್ಸಳ ವಾಹನಗಳಿಗೆ ಹಾಗೂ ರಾಜ್ಯ ಸರಕಾರದ ಅನುದಾನಡಿ ಪೊಲೀಸ್ ಜೀ‌ಪ್ ಗಳಲ್ಲಿ‌ ಕ್ಯಾಮೆರಾ ಅಳವಡಿಸಲಾಗುತ್ತಿದೆ. ಇದರಿಂದ ಪೊಲೀಸ್ ಇಲಾಖೆಯಲ್ಲಿ ಪಾರದರ್ಶಕತೆ ಕಾಪಾಡಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

ಇತ್ತೀಚೆಗೆ ನಗರದಲ್ಲಿ ರೋಡ್ ರೇಜ್ ಪ್ರಕರಣಗಳು ಹೆಚ್ಚಾಗುತ್ತಿವೆ. ಕ್ಷುಲ್ಲಕ ಕಾರಣಗಳಿಗಾಗಿ ಹಲ್ಲೆ ಘಟನೆಗಳು ವರದಿಯಾಗುತ್ತಿವೆ. ಹೊಯ್ಸಳಕ್ಕೆ ಡ್ಯಾಷ್ ಕ್ಯಾಮರಾ ಅಳವಡಿಕೆಯಿಂದ ಸಿಬ್ಬಂದಿ ಕಾರ್ಯದಕ್ಷತೆ ಜೊತೆಗೆ ಅಪರಾಧವಾಗದಂತೆ ತಡೆಯಲು ಸಹಕಾರಿಯಾಗಲಿದೆ. ಹಾಗೆಯೇ ತುರ್ತು ಅಪರಾಧ ಸಂದರ್ಭಗಳಲ್ಲಿ ತ್ವರಿತಗತಿಯಲ್ಲಿ ಸ್ಥಳಕ್ಕೆ ತಲುಪಲು ಪೂರಕವಾಗುತ್ತದೆ. ಪೊಲೀಸ್ ಸಿಬ್ಬಂದಿ ಸಾರ್ವಜನಿಕರೊಂದಿಗೆ ವರ್ತಿಸುವ ನಡವಳಿಕೆಯನ್ನು ಸುಧಾರಿಸಬಹುದಾಗಿದೆ ಎಂದು ಬಿ.ದಯಾನಂದ್ ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News