ʼಕಲ್ಲಡ್ಕ ರಿಪಬ್ಲಿಕ್ʼ‌ ಅನ್ನು ಜೈಲಿನಲ್ಲಿಟ್ಟರೆ ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟವಾಗುತ್ತದೆ : ಬಿ.ಕೆ. ಹರಿಪ್ರಸಾದ್

Update: 2024-02-18 17:21 GMT

ಬೆಂಗಳೂರು: ಕಲ್ಲಡ್ಕ ರಿಪಬ್ಲಿಕ್ ಮತ್ತು ಕರ್ನಾಟಕದ ಹಿಂದುತ್ವ ಲ್ಯಾಬೋರೇಟರಿಯನ್ನು ಒಂದು ದಿನದ ಮಟ್ಟಿಗೆ ಜೈಲಿನಲ್ಲಿಡಬೇಕು. ಆಗ ಇಡೀ ರಾಜ್ಯ ಕುವೆಂಪು ಬಯಸಿದಂತೆ ಸರ್ವ ಜನಾಂಗದ ಶಾಂತಿಯ ತೋಟ ಆಗುತ್ತದೆ ಎಂದು ವಿಧಾನ ಪರಿಷತ್ತಿನ ಸದಸ್ಯ ಬಿ.ಕೆ. ಹರಿಪ್ರಸಾದ್ ಅಭಿಪ್ರಾಯಪಟ್ಟರು.

ರವಿವಾರ ಇಲ್ಲಿನ ಸೌಹಾರ್ದ ಸಭಾಂಗಣದಲ್ಲಿ  ಆಯೋಜಿಸಿದ್ದ ‘ವಿ.ಡಿ. ಸಾವರ್ಕರ್: ಏಳು ಮಿಥ್ಯಗಳು’ ಕೃತಿ ಬಿಡುಗಡೆ ಹಾಗೂ ‘ಮತೀಯ ಪ್ರಭುತ್ವ ಮತ್ತು ಸೆಕ್ಯುಲರ್ ಪ್ರಜಾಪ್ರಭುತ್ವ’ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ʼಕಲ್ಲಡ್ಕ ರಿಪಬ್ಲಿಕ್ʼ ಕರ್ನಾಟಕವನ್ನು ಹಿಡಿತದಲ್ಲಿ ಇಟ್ಟುಕೊಳ್ಳುಲು ಪ್ರಯತ್ನಿಸುತ್ತಿದ್ದು, ಇದರಿಂದ ನಾಡಿನ ಶಾಂತಿ ಹಾಳಾಗುತ್ತಿದೆ. ಇದನ್ನು ನಿಯಂತ್ರಿಸಲು ಸರಕಾರದ ಮೇಲೆ ಒತ್ತಡ ತರಬೇಕು ಎಂದರು.

ನಾನು ಚುನಾವಣಾ ವಿಚಾರವಾಗಿ ರಾಜಸ್ಥಾನಕ್ಕೆ ಹೋದಾಗ, ಆರೆಸ್ಸೆಸ್‍ನ ಪ್ರವೀಣ್ ತೋಗಾಡಿಯಾ ಜನರಿಗೆ ತ್ರಿಶೂಲವನ್ನು ಹಂಚುತ್ತಿದ್ದರು. ಇದು ಕಾನೂನಿಗೆ ವಿರುದ್ಧವಾಗಿದ್ದು, ಅವರನ್ನು ಬಂಧಿಸುವಂತೆ ಅಲ್ಲಿನ ಸರಕಾರವನ್ನು ಒತ್ತಾಯಿಸಿದೆ. ಅವರನ್ನು ಬಂಧಿಸಿದರೆ ಗುಜಾರಾತ್‍ನಲ್ಲಿ ಗಲಭೆಯಾಗುತ್ತದೆ ಎಂದು ನನಗೆ ತಿಳಿಸಿದ್ದರು. ಆದರೆ ತೋಗಾಡಿಯಾರನ್ನು ಜೈಲಿಗೆ ಹಾಕಿದಾಗ ನೋಡಲು ಅವರ ತಂಗಿ ಮಾತ್ರ ಬಂದರು. ಒಂದು ವಾರ ಜೈಲಿನಲ್ಲಿದ್ದ ತೋಗಾಡಿಯಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಮುಂದೆ ಜೈಲಿನಿಂದ ಬಿಡುಗಡೆ ಮಾಡುವಂತೆ ಅಂಗಲಾಚಿದರು. ಈ ಘಟನೆ ನಡೆದು 20 ವರ್ಷಗಳು ನಡೆದಿದ್ದು, ಅಂದಿನಿಂದ ಇಲ್ಲಿಯವರೆಗೂ ತ್ರಿಶೂಲವನ್ನು ಹಂಚಲಿಲ್ಲ. ಕರ್ನಾಟಕ ಸರಕಾರವು ಇದೇ ಕ್ರಮವನ್ನು ಪಾಲಿಸಬೇಕು ಎಂದು ಅವರು ತಿಳಿಸಿದರು.

ಕರ್ನಾಟಕದ ಬಿಜೆಪಿ ಪಕ್ಷದ ಆಳ್ವಿಕೆಯಲ್ಲಿ ಆರೆಸ್ಸೆಸ್‍ನ ನಾಯಕರಾದ ಹೊಸಬಾಳೆ, ಮುಕುಂದ್ ಮತ್ತು ಬಿ.ಎಲ್. ಸಂತೋಷ್ ಇದ್ದಾರೆ. ಮುಂದಿನ ಗುರಿ ಕರ್ನಾಟಕವೇ ಆಗಿದೆ. ಆದರೆ ನಾವು ಅದಕ್ಕೆ ಅವಕಾಶ ನೀಡದೆ ಯುವಕರಲ್ಲಿ, ಮಹಿಳೆಯರಲ್ಲಿ ಅರಿವು ಮೂಡಿಸಬೇಕಾಗಿದೆ. ಇಲ್ಲವಾದಲ್ಲಿ ಪೂರ್ತಿ ಬಹುಮತದಿಂದ ಅಧಿಕಾರಕ್ಕೆ ಬರುವುದು ಕಷ್ಟವಾಗುತ್ತದೆ ಎಂದು ಬಿ.ಕೆ. ಹರಿಪ್ರಸಾದ್ ತಿಳಿಸಿದರು.

ಸಂಸತ್‌ ನಲ್ಲಿ ಗಾಂಧಿ ಫೋಟೋಗೆ ಎದುರಾಗಿ ಸಾವರ್ಕರ್ ಫೋಟೋ ಇಟ್ಟಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಸಾವರ್ಕರ್ ಪಾತ್ರವೇನು? ದೇಶಕ್ಕೆ ಆತನ ಕೊಡುಗೆ ಏನು? ಆತನ ಹಿಂದು ಮಹಾಸಭಾವು ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಲು ನಿರಾಕರಿಸಿತ್ತು. ಅಸಹಾಕಾರ ಚಳುವಳಿಯಿಂದ ದೂರ ಉಳಿಯಲು ನಿರ್ಧರಿಸಿತ್ತು. ಆತನನ್ನು ಸ್ವಾತಂತ್ರ್ಯ ಹೋರಾಟಗಾರನೆಂದು ಕರೆಯಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.

ಸದನಗಳಲ್ಲಿ ಸಂವಿಧಾನ ರಚನೆ ಬಗ್ಗೆ ಚರ್ಚೆಯಾಗುವಾಗ ಪೀಠಿಕೆಯಲ್ಲಿ ಧರ್ಮವನ್ನ ಸೇರಿಸಬೇಕೆಂದು ಕರ್ನಾಟಕದ ಮಂಗಳೂರಿನ ಕಾಮತ್ ಎಂಬವರು ವಾದ ಮಂಡಿಸಿದ್ದರು. ದೇಶದಲ್ಲಿ ಎಲ್ಲ ಸಮುದಾಯದ ಜನರಿದ್ದಾರೆ. ಎಲ್ಲ ಧರ್ಮ, ದೇವರ ಹೆಸರನ್ನು ಸೇರಿಸಲು ಸಾಧ್ಯವಿಲ್ಲ. ಹೀಗಾಗಿ ಪೀಠಿಕೆಯಲ್ಲಿ ‘ಭಾರತದ ಪ್ರಜೆಗಳಾದ ನಾವು’ ಎಂಬುದನ್ನು ಸೇರಿಸಿದರು ಎಂದು ತಿಳಿಸಿದರು.

ಪ್ರಬಲ ಜಾತಿಯವರು ಶೂದ್ರರ ಮೇಲೆ ದೌರ್ಜನ್ಯ ಎಸಗಿದರೆ, ಅವರಿಗೆ ಛೀಮಾರಿ ಹಾಕಿ ಬಿಟ್ಟುಬಿಡಬೇಕು. ಅದೇ ಶೂದ್ರನಿಂದ ಪ್ರಬಲ ಜಾತಿಯವರಿಗೆ ಅಪಮಾನವಾದರೆ, ಅವರನ್ನು ಗಲ್ಲಿಗೇರಿಸಬೇಕೆಂದು ಮನುಸ್ಮೃತಿ ಹೇಳುತ್ತದೆ. ಮಹಿಳೆಯರು, ದಲಿತರು, ಶೂದ್ರದನ್ನು ಶೋಷಿಸುವುದೇ ಮನುಸ್ಕೃತಿಯ ಜೀವಾಳ ಎಂದು ಅವರು ಹೇಳಿದರು.

ಹಿಂದಿ ಮಾತನಾಡುವ ಭಾಗಗಳಲ್ಲಿ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಮಧ್ಯಪ್ರದೇಶದಲ್ಲಿ 2013ರಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆದಿತ್ತು. ಆರೋಪಿಗಳು ಪ್ರಬಲ ಜಾತಿಯವರಾಗಿದ್ದರಿಂದ ಎಫ್‍ಐಆರ್ ದಾಖಲಿಸುವಲ್ಲಿ ಪೊಲೀಸರು ಹಿಂದೇಟು ಹಾಕಿದ್ದರು. ಇನ್ನು, ಬಿಲ್ಕೀಸ್ ಬಾನು ಪ್ರಕರಣದಲ್ಲಿ ಏನಾಗುತ್ತಿದೆ ಎಂಬುದನ್ನು ನಾವು ನೋಡುತ್ತಿದ್ದೇವೆ. ಗೋದ್ರಾ ಹತ್ಯಾಕಾಂಡವನ್ನು ನಾವು ಮರೆಯಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ತಡಗಡಲೆ ಸುರೇಂದ್ರ ರಾವ್, ಮೀನಾಕ್ಷಿ ಬಾಳಿ, ಶಂಶುಲ್ ಇಸ್ಲಾಂ, ಡಾ. ಕೆ ಪ್ರಕಾಶ್ ಇದ್ದರು.

ಉತ್ತರ ಭಾರತಕ್ಕೆ ಹೋಲಿಕೆ ಮಾಡಿದರೆ, ದಕ್ಷಿಣ ಭಾರತ 200 ವರ್ಷ ಮುಂದಿದೆ. ಗುಜರಾತ್, ಮಹಾರಾಷ್ಟ್ರಕ್ಕೆ ಹೋಲಿಸಿದರೆ, ನಾವು 50 ವರ್ಷ ಮುಂದಿದ್ದೇವೆ. ಏಕೆಂದರೆ, ದಕ್ಷಿಣ ಭಾರತದಲ್ಲಿ ಬಸವಣ್ಣ, ಪೆರಿಯಾರ್, ಫುಲೆ, ಅಂಬೇಡ್ಕರ್, ವೇಮನ ಸೇರಿದಂತೆ ಹಲವಾರು ಮಹನೀಯರು ಸಮಾಜ ಸುಧಾರಣೆಯಲ್ಲಿ ತೊಡಗಿದ್ದರು. ಅವರೆಲ್ಲರ ಪರಿಶ್ರಮದಿಂದ ನಾವು ಮುಂದಿದ್ದೇವೆ. ಇಂದಿಗೂ ಉತ್ತರದಲ್ಲಿ ನಾನಾ ಮೂಲಸೌಲಭ್ಯಗಳ ಕೊರತೆ ಹೇರಳವಾಗಿದೆ. ಮಧ್ಯಪ್ರದೇಶದಂತಹ ರಾಜ್ಯಗಳಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ನಡೆಯುತ್ತದೆ.

ಬಿ.ಕೆ. ಹರಿಪ್ರಸಾದ್, ವಿಧಾನ ಪರಿಷತ್ತಿನ ಸದಸ್ಯ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News