ಕೃತಿಗಳನ್ನು ರಚಿಸುವುದಕ್ಕೆ ಪ್ರಾಮಾಣಿಕತೆ ಇರಬೇಕು: ನಟ ಪ್ರಕಾಶ್ ರಾಜ್

Update: 2024-11-17 13:34 GMT

ಬೆಂಗಳೂರು: ಯಾವುದೇ ಲೇಖಕ ನಿರಂತರವಾಗಿ ಕೃತಿಗಳನ್ನು ರಚಿಸಲು ಧೈರ್ಯ, ಪ್ರಾಮಾಣಿಕತೆಯ ಜತೆಗೆ ಹುಚ್ಚುತನವೂ ಬೇಕು. ಅಂತಹ ಒಂದು ವಿಶಿಷ್ಟ ಗುಣ ಲೇಖಕ ಜೋಗಿ ಅವರಲ್ಲಿದೆ ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಹೇಳಿದ್ದಾರೆ.

ರವಿವಾರ ನಗರದ ಬಿ.ಪಿ.ವಾಡಿಯಾ ಸಭಾಂಗಣದಲ್ಲಿ ಸಾವಣ್ಣ ಪ್ರಕಾಶನ ವತಿಯಿಂದ ಹಮ್ಮಿಕೊಂಡಿದ್ದ ಲೇಖಕ ಜೋಗಿ ರಚಿಸಿರುವ ‘ಇಳಂಗೋವನ್’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜೋಗಿ ನಾಲ್ಕು ದಶಕಗಳಲ್ಲಿ ನಿರಂತರವಾಗಿ ತೆರೆದ ಪುಸ್ತಕದಂತೆ ನೂರು ಕೃತಿಗಳನ್ನು ಬರೆದಿರುವುದು ಮೆಚ್ಚುಗೆಯ ಸಂಗತಿ. ಅವರಲ್ಲಿರುವ ಹೊಸ ಹುಡುಕಾಟ, ತೆರವುಗೊಳ್ಳುವಿಕೆ, ಏನನ್ನು ಯೋಚಿಸಿದೇ ಬರೆಯುವುದಕ್ಕೆ ಬದ್ಧನಾಗುವುದು ಇಷ್ಟವಾಗುವ ವಿಶಿಷ್ಟ ಗುಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಮರ ಎನ್ನುವುದು ದೊಡ್ಡ ಪ್ರತಿಮೆ. ಅದನ್ನು ನೋಡಿದಾಗ ಮರಕ್ಕೆ 50 ವರ್ಷವಾ, 60 ವರ್ಷನಾ, ಎಷ್ಟು ಗಂಭೀರವಾಗಿ ಇದೆ ಎಂದು ಅನಿಸುತ್ತೆ. ಆದರೆ ಆ ಮರದ ವಯಸ್ಸು, ಅನುಭವಗಳು ನಮಗೆ ನಿಖರವಾಗಿ ಗೊತ್ತಾಗುವುದಿಲ್ಲ. ಮರದ ಹತ್ತಿರ ಹೋದಾಗ ಅದರಲ್ಲಿನ ಆಭ್ಯಾಯತೆ, ನಂಬಬಹುದು, ಇದನ್ನು ತಬ್ಬಿಕೊಳ್ಳಬಹುದು, ಕೆಳಗೆ ನಿಲ್ಲಬಹುದು ಎನ್ನುವ ಚಿಂತನೆ ಬರುತ್ತದೆ ಎಂದು ಪ್ರಕಾಶ್‍ ರಾಜ್ ಹೇಳಿದರು.

ವ್ಯಕ್ತಿ ನನ್ನ ಮುಂದೆ ಇಲ್ಲದೆ ಇದ್ದಾಗಲೂ, ನನ್ನನ್ನು ಕಾಡುವ ಕೆಲವು ಗೆಳೆಯರಲ್ಲಿ ಜೋಗಿ ಒಬ್ಬರು. ಯಾವುದಾದರೂ ಸಂದರ್ಭದಲ್ಲಿ ನಿರ್ಧಾರ ತೆಗೆದುಕೊಳ್ಳಬೇಕಾದರೆ ಅಥವಾ ಮಾತುಗಳನ್ನು ಮಾತಾಡಬೇಕಾದರೆ ಇದು ನನ್ನ ಗೆಳೆಯನಿಗೆ ಗೊತ್ತಾದರೆ ಅವನ ಕಣ್ಣಿನಲ್ಲಿ ಕೆಳಗೆ ಬಿದ್ದೆನಾ ಎಂದು ಅನಿಸುತ್ತದೋ ಅಂತಹ ಗೆಳೆತನ ಅದ್ಬುತವಾದ ಗೆಳತನ. ಆ ತರದ ವ್ಯಕ್ತಿಗಳಲ್ಲಿ ಜೋಗಿ ಒಬ್ಬರು ಎಂದು ಅವರು ತಿಳಿಸಿದರು.

ಸಾಮಾಜಿಕ ಜಾಲತಾಣದಲ್ಲಿ, ಜೋಗಿ ಬಲಪಂಥೀಯ, ನಾನು ಎಡಪಂಥೀಯ ಹೇಗೆ ಇವರಿಬ್ಬರೂ ಅಷ್ಟೊಂದು ಚೆನ್ನಾಗಿ ಇರುತ್ತಾರೆ ಅಂತ ಚರ್ಚೆ ಮಾಡಿಕೊಳ್ಳುತ್ತಿದ್ದಾರೆ. ಜೋಗಿ, ಜೋಗಿಯ ಕುಟುಂಬದ ಜೊತೆಗಿನ ಹಲವು ವರ್ಷದ ಪಯಣದಲ್ಲಿನ ಸಂಬಂಧ ಮುಖ್ಯ. ಎಲ್ಲದನ್ನೂ ಪ್ರೀತಿಸುವ ವ್ಯಕ್ತಿತ್ವ ನಮ್ಮಲ್ಲಿದೆ. ಅಂದುಕೊಳ್ಳುವರು ಅಂದುಕೊಳ್ಳುತ್ತಿರಿ, ನಮ್ಮ ಗೆಳೆತನ ಕಡಿಮೆ ಆಗುವುದಿಲ್ಲ ಎಂದು ಪ್ರಕಾಶ್‍ರಾಜ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಲೇಖಕರಾದ ಬಿ.ಆರ್.ಲಕ್ಷ್ಮಣ್‍ರಾವ್, ನಿರ್ದೇಶಕ ಟಿ.ಎನ್.ಸೀತಾರಾಂ, ಅಂಕಿತ ಪುಸ್ತಕ ಪ್ರಕಾಶನದ ಪ್ರಕಾಶ್ ಕಂಬತ್ತಳ್ಳಿ, ಲೇಖಕ ಜೋಗಿ ಸೇರಿದಂತೆ ಹಲವರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News