ಬೆದರಿಕೆ, ವಂಚನೆ ಪ್ರಕರಣ : ಸೋಮಣ್ಣ ಪುತ್ರ ಅರುಣ್ ಸೇರಿ ಮೂವರಿಗೆ ನಿರೀಕ್ಷಣಾ ಜಾಮೀನು ಮಂಜೂರು

Update: 2024-06-16 14:51 GMT

ಬೆಂಗಳೂರು: ಉದ್ಯಮದಲ್ಲಿ ವಂಚಿಸಿ, ಜೀವ ಬೆದರಿಕೆ ಹಾಕಿದ ಆರೋಪ ಸಂಬಂಧಿತ ಪ್ರಕರಣದಲ್ಲಿ ಕೇಂದ್ರದ ಜಲಶಕ್ತಿ ಹಾಗೂ ರೈಲ್ವೆ ಇಲಾಖೆಯ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಪುತ್ರ ಡಾ.ಬಿ.ಎಸ್.ಅರುಣ್ ಸೇರಿದಂತೆ ಮೂವರಿಗೆ ಬೆಂಗಳೂರಿನ ಸತ್ರ ನ್ಯಾಯಾಲಯ ಶನಿವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಬೆಂಗಳೂರಿನ ಸಂಜಯನಗರ ಠಾಣೆಯಲ್ಲಿ ತೃಪ್ತಿ ಹೆಗಡೆ ಎಂಬುವರು ದಾಖಲಿಸಿರುವ ಕ್ರಿಮಿನಲ್ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಡಾ.ಬಿ.ಎಸ್.ಅರುಣ್, ಡಿ.ಜೀವನ್ ಕುಮಾರ್ ಹಾಗೂ ಜಿ.ಪ್ರಮೋದ್ ರಾವ್ ಸಲ್ಲಿಸಿದ್ದ ಅರ್ಜಿಯನ್ನು 45ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮುಹಮ್ಮದ್ ಮೊಯಿನುದ್ದೀನ್ ಪುರಸ್ಕರಿಸಿದ್ದಾರೆ.

ದೂರುದಾರೆ ತೃಪ್ತಿ ಹೆಗಡೆ ಅವರು ನೀಡಿರುವ ದೂರಿಗೆ ಸಂಬಂಧಿಸಿದಂತೆ ಸಂಜಯ್ ನಗರ ಠಾಣೆಯ ಪೊಲೀಸರು ಮುಂದಿನ ಆದೇಶದವರೆಗೆ ಅರ್ಜಿದಾರರನ್ನು ಬಂಧಿಸಬಾರದು. ಅರ್ಜಿದಾರರು ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಪುರಸ್ಕರಿಸಲಾಗಿದೆ ಎಂದು ನ್ಯಾಯಾಲಯ ಆದೇಶ ಮಾಡಿದೆ.

ಪ್ರತಿವಾದಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿ, ಆಕ್ಷೇಪಣೆ ಸಲ್ಲಿಸಲು ಆದೇಶಿಸಲಾಗಿದೆ. ವಿಚಾರಣೆಯನ್ನು ಜೂ.22ಕ್ಕೆ ಮುಂದೂಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರಕರಣದ ವಿವರ: ಸಂಜಯ್‍ನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್‍ಐಆರ್ ಪ್ರಕಾರ, ಸಂಜಯನಗರದ ನಿವಾಸಿ ದೂರುದಾರೆ ತೃಪ್ತಿ ಹೆಗಡೆ ಹಾಗೂ ಆಕೆಯ ಪತಿ ಮಧ್ವರಾಜ್ ಎಂಬುವರು ಈವೆಂಟ್ ಮ್ಯಾನೇಜ್‍ಮೆಂಟ್ ಕಂಪೆನಿ ನಡೆಸುತ್ತಿದ್ದು, ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಮಾರ್ಕೆಟಿಂಗ್ ಸರ್ವೀಸ್ ಮತ್ತು ಈವೆಂಟ್ ಮ್ಯಾನೇಜ್‍ಮೆಂಟ್ ಕೆಲಸದಲ್ಲಿದ್ದರು. 2013ರಲ್ಲಿ ಮಧ್ವರಾಜ್ ಅವರು ಸರಕಾರಿ ಕಾರ್ಯಕ್ರಮ ಆಯೋಜಿಸಿದ್ದರು. ಈ ಸಂದರ್ಭದಲ್ಲಿ ಅವರಿಗೆ ಸೋಮಣ್ಣ ಪುತ್ರ ಡಾ.ಅರುಣ್ ಪರಿಚಯವಾಗಿತ್ತು.

2017ರಲ್ಲಿ ಮಧ್ವರಾಜ್ ಒಡೆತನದ ಕಂಪೆನಿಯು ಅರುಣ್ ಪುತ್ರಿಯ ಹುಟ್ಟುಹಬ್ಬ ಕಾರ್ಯಕ್ರಮ ಆಯೋಜಿಸಿತ್ತು. ಇದು ಯಶಸ್ವಿಯಾಗಿ ನಡೆದುದ್ದರಿಂದ ಮಧ್ವರಾಜ್ ಮತ್ತು ಅರುಣ್ ಗೆಳೆತನ ಮತ್ತೊಂದು ಹಂತಕ್ಕೆ ಹೋಗಿತ್ತು. 2019ರಲ್ಲಿ ಮಧ್ವರಾಜ್ ಮತ್ತು ಅರುಣ್ ಇಬ್ಬರೂ ಪಾಲುದಾರಿಕೆ ಒಪ್ಪಂದ ಮೂಲಕ ನೈಬರ್ ಹುಡ್ ಈವೆಂಟ್ ಮ್ಯಾನೇಜ್‍ಮೆಂಟ್ ಕಂಪೆನಿ ಆರಂಭಿಸಿದ್ದರು. ಆದರೆ, ಇದರಲ್ಲಿ ಮಧ್ವರಾಜ್ ಹೂಡಿಕೆ ಮಾಡಿರಲಿಲ್ಲ. ಇದರಲ್ಲಿ ಅರುಣ್ ಅವರು ಹೂಡಿಕೆ, ಪಾವತಿ ಹಾಗೂ ಸಂಗ್ರಹಣೆಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದರು.

ಒಪ್ಪಂದದ ಪ್ರಕಾರ ಕಂಪೆನಿ ಸರಿಯಾದ ರೀತಿಯಲ್ಲಿ ಪ್ರಗತಿ ಸಾಧಿಸದ ಕುರಿತು ತೃಪ್ತಿ ಪತಿ ಮಧ್ವರಾಜ್ ಅವರು ಅರುಣ್‍ರಲ್ಲಿ ವಿಚಾರಿಸಿದ್ದರು. ಆದರೆ, ಅವರು ಯಾವುದೇ ಮಾಹಿತಿ ನೀಡಿರಲಿಲ್ಲ. ಆನಂತರ ತೃಪ್ತಿ ಮತ್ತು ಮಧ್ವರಾಜ್ ಒಟ್ಟಿಗೆ ಕಚೇರಿಗೆ ಹೋದಾಗ ಉದ್ಯೋಗಿಗಳ ಎದುರು ಅರುಣ್ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಅಲ್ಲದೇ, ಕಂಪೆನಿಯ ಪಾಲುದಾರಿಕೆ ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದರು.

ಈ ಹಿನ್ನೆಲೆಯಲ್ಲಿ ಅರುಣ್, ಜೀವನ್ ಕುಮಾರ್ ಮತ್ತು ಪ್ರಮೋದ್ ರಾವ್ ವಿರುದ್ಧ ಸಂಜಯ್ ನಗರ ಠಾಣೆಯ ಪೊಲೀಸರು ಐಪಿಸಿ ಸೆಕ್ಷನ್‍ಗಳಾದ 506, 504, 387, 420, 477ಎ, 323, 327, 347, 354 ಮತ್ತು 34 ಅಡಿಯಲ್ಲಿ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News