‘ಬಾಹ್ಯಾಕಾಶ ವಲಯ’ದ ಅಭಿವೃದ್ಧಿಯಲ್ಲೂ ನವೋದ್ಯಮಗಳ ಕೊಡುಗೆ ಅನನ್ಯ : ಇಸ್ರೋ ಅಧ್ಯಕ್ಷ ಡಾ.ಸೋಮನಾಥ್

Update: 2024-11-20 13:36 GMT

ಬೆಂಗಳೂರು : ಬಾಹ್ಯಾಕಾಶ ವಲಯದಲ್ಲಿ ಭಾರತ ಅಭೂತಪೂರ್ವ ಸಾಧನೆಗೈದಿರುವುದು ಜಗಜ್ಜಾಹೀರು. ಇದರ ಹಿಂದೆ ಭಾರತದ ನವೋದ್ಯಮ(ಸ್ಟಾರ್ಟ್‌ಅಪ್) ಗಳ ಕೊಡುಗೆಯು ಮಹತ್ವದ್ದಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಡಾ.ಸೋಮನಾಥ್ ತಿಳಿಸಿದರು.

ಬೆಂಗಳೂರು ಟೆಕ್ ಶೃಂಗಸಭೆಯ ಎರಡನೇ ದಿನವಾದ ಬುಧವಾರ ಅರಮನೆ ಆವರಣದಲ್ಲಿ ನಡೆದ ಬಾಹ್ಯಾಕಾಶ ತಂತ್ರಜ್ಞಾನಗಳ ಅಧಿವೇಶನದಲ್ಲಿ ಮಾತನಾಡಿದ ಅವರು, ಭಾರತೀಯ ಬಾಹ್ಯಾಕಾಶ ನೀತಿ-2023ರ ಮೂಲಕ ಅನೇಕ ನವೋದ್ಯಮಗಳು ನಾವಿನ್ಯತೆ, ಆವಿಷ್ಕಾರಗಳಲ್ಲಿ ಇನ್ನಷ್ಟು ಸಕ್ರಿಯಗೊಳ್ಳುತ್ತಿವೆ ಎಂದು ಹೇಳಿದರು.

ಈಗಾಗಲೇ ಬಾಹ್ಯಾಕಾಶ ವಲಯದಲ್ಲಿ ನವೋದ್ಯಮಗಳು ತಮ್ಮದೇ ಆದ ಕೊಡುಗೆ ನೀಡುವಲ್ಲಿ ಯಶಸ್ವಿಯಾಗಿದೆ. ಇನ್ನು ಮುಂದೆ ಭಾರತೀಯ ನವೋದ್ಯಮಗಳು ಉಡಾವಣಾ ವಾಹನ ಮತ್ತು ಉಪಗ್ರಹ ತಯಾರಿಕೆ ಮತ್ತು ಕಾರ್ಯಾಚರಣೆಯ ಸಾಮರ್ಥ್ಯಗಳನ್ನು ಪ್ರದರ್ಶಿಸಲಿವೆ ಎಂದು ಅವರು ತಿಳಿಸಿದರು.

ಸಂಶೋಧನಾ ಅಭಿವೃದ್ಧಿ ಸಂಸ್ಥೆ (ಡಿಆರ್‍ಡಿಒ)ಯ ನಿರ್ದೇಶಕ ಡಾ.ಬಿ.ಕೆ.ದಾಸ್ ಮಾತನಾಡಿ, ರಕ್ಷಣಾ ತಂತ್ರಜ್ಞಾನಗಳಲ್ಲಿ ಭಾರತವು ಜಾಗತಿಕ ಮಟ್ಟದಲ್ಲಿ ಸೂಪರ್ ಪವರ್ ಆಗಿ ರೂಪಾಂತರಗೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಭಾರತೀಯ ರಕ್ಷಣಾ ತುರ್ತುಗಳು ಹೆಚ್ಚಲಿವೆ. ಉದ್ಯೋಗಾವಕಾಶಗಳು ಕೂಡಾ ಹೆಚ್ಚಾಗಲಿವೆ ಎಂದು ಅಭಿಪ್ರಾಯಪಟ್ಟರು.

ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರರಾದ ಅನ್ನೆ ನ್ಯೂಬಗರ್ ಸಂವಾದದಲ್ಲಿ ಭಾಗವಹಿಸಿ ಭಾರತ-ಯುಎಸ್‍ಎ ಪಾಲುದಾರಿಕೆ ಮತ್ತು ಎರಡೂ ದೇಶಗಳ ಬಾಹ್ಯಾಕಾಶ ತಂತ್ರಜ್ಞಾನಗಳನ್ನು ತುಲನೆ ಮಾಡುತ್ತಾ ತಮ್ಮ ವಿಚಾರವನ್ನು ಮಂಡಿಸಿದರು.

ಅಧಿವೇಶನದಲ್ಲಿ, ಕರ್ನಾಟಕ ಬಾಹ್ಯಾಕಾಶ ತಂತ್ರಜ್ಞಾನ ನೀತಿ 2024-2029 ಕರಡು ಪ್ರತಿಯನ್ನು ಗಣ್ಯರು ಬಿಡುಗಡೆ ಮಾಡಿದರು. ಇಸ್ರೋ ಕೇಂದ್ರಗಳು, ಸಾರ್ವಜನಿಕ ವಲಯದ ಸಂಸ್ಥೆಗಳು (ಪಿಎಸ್‍ಯು), ಶೈಕ್ಷಣಿಕ ಸಂಸ್ಥೆಗಳು ಮತ್ತು ಖಾಸಗಿ ವಲಯದ ಏರೋಸ್ಪೇಸ್ ಮತ್ತು ಬಾಹ್ಯಾಕಾಶ ಕಂಪನಿಗಳು ಮತ್ತು ಎಂಎಸ್‍ಎಂಇ ಗಳಿಂದ ಸಕ್ರಿಯಗೊಳಿಸಲಾದ ಬಾಹ್ಯಾಕಾಶ ತಂತ್ರಜ್ಞಾನಗಳಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ ಎಂಬಿತ್ಯಾದಿ ವಿಚಾರಗಳನ್ನು ಕರಡು ಪ್ರತಿ ಒಳಗೊಂಡಿದೆ.

ಅಧಿವೇಶನದಲ್ಲಿ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ, ಐಟಿಬಿಟಿ ಇಲಾಖೆ ಕಾರ್ಯದರ್ಶಿ ಡಾ.ಏಕರೂಪ್ ಕೌರ್ ಉಪಸ್ಥಿತರಿದ್ದರು.


Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News