ಪತ್ರಕರ್ತರ ಆರೋಗ್ಯ ಸಮಸ್ಯೆಗಳಿಗೆ ಸರಕಾರದ ನೆರವು : ಕೆ.ವಿ.ಪ್ರಭಾಕರ್

Update: 2024-11-19 16:44 GMT

ಬೆಂಗಳೂರು : ಪತ್ರಕರ್ತರ ಆರೋಗ್ಯದ ಸಮಸ್ಯೆಗಳಿಗೆ ಸುವರ್ಣ ಆರೋಗ್ಯ ಟ್ರಸ್ಟ್ ವತಿಯಿಂದ 12 ಕೋಟಿ ರೂ.ಅನುದಾನ ಬಿಡುಗಡೆಗೊಳಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಾರ್ತಾ ಇಲಾಖೆ ನೇತೃತ್ವದಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ತಿಳಿಸಿದ್ದಾರೆ.

ಮಂಗಳವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯೋತ್ಸವ ಹಾಗೂ ಸುವರ್ಣ ಮಹೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವೃತ್ತಿ ಜೀವನದಲ್ಲಿ ಪತ್ರಕರ್ತರು ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಈ ಬಗ್ಗೆ ಸರಕಾರ ಹೆಚ್ಚಿನ ಕಾಳಜಿ ವಹಿಸಲಿದ್ದು, ಹಲವಾರು ಯೋಜನೆಗಳನ್ನು ಜಾರಿಗೊಳಿಸಲಿದೆ ಎಂದು ಭರವಸೆ ನೀಡಿದರು.

ಮುಂಬರುವ ರಾಜ್ಯೋತ್ಸವ ಹಾಗೂ ಸುವರ್ಣ ಮಹೋತ್ಸವ ಪ್ರಶಸ್ತಿಗೆ ಮಹಿಳಾ ಪತ್ರಕರ್ತರು, ಪತ್ರಿಕಾ ವಿತರಕರಿಗೆ ಮತ್ತು ಛಾಯಾಗ್ರಾಹಕರಿಗೆ ಆಯ್ಕೆ ಮಾಡಿ ಗೌರವಿಸಲಾಗುವುದು ಎಂದು ಅವರು ತಿಳಿಸಿದರು.

ಪ್ರೆಸ್‍ಕ್ಲಬ್ ಆಫ್ ಬೆಂಗಳೂರು ಅಧ್ಯಕ್ಷ ಆರ್.ಶ್ರೀಧರ್ ಮಾತನಾಡಿ, ವೃತ್ತಿ ಜೀವನದಲ್ಲಿ ಪತ್ರಕರ್ತರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಪತ್ರಕರ್ತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೆ.ವಿ. ಪ್ರಭಾಕರ್ ಅವರು ಸರಕಾರಕ್ಕೆ ಮನವಿ ಮಾಡಿದ್ದರು. ಅಲ್ಲದೇ ಪ್ರೆಸ್‍ಕ್ಲಬ್ ಕಾಮಗಾರಿ ಸಂಬಂಧ ಪಟ್ಟಂತೆ 1.50ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯಿಷಾ ಖಾನಂ, ಪ್ರೆಸ್‍ಕ್ಲಬ್‍ನ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬೆಳ್ಳಿತಟ್ಟೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿಲೋಕೇಶ, ಕೆ.ಎಂ.ಸಿದ್ದರಾಜು, ಎನ್.ಎಸ್.ಶಂಕರ್ ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.

ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ: ‘ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪತ್ರಕರ್ತ ಎನ್.ಎಸ್.ಶಂಕರ್, ಎಂ.ಜಿ. ಕಾರಟಗಿ, ರಾಮಕೃಷ್ಣ ಬಡಶೇಷಿ ಮತ್ತು ಸುವರ್ಣ ಮಹೋತ್ಸವ ಪ್ರಶಸ್ತಿ ಪುರಸ್ಕೃತರಾದ ಎಚ್.ಬಿ.ಮದನಗೌಡ, ಎಂ.ಸಿದ್ದರಾಜು, ವಿಶ್ವನಾಥ್ ಸುವರ್ಣ, ಆರ್.ಜಿ.ಹಳ್ಳಿ ನಾಗರಾಜ್, ರಾಜು ಮಳವಳ್ಳಿ ಭಾರತಿ ಹೆಗಡೆ, ಮಂಜುನಾಥ ಅದ್ದೆ, ಮಲ್ಲಿಕಾರ್ಜುನ ಹೆಗ್ಗಳಗಿ, ರುದ್ರಪ್ಪ ಅಸಂಗಿ, ಶಾಂತಕುಮಾರಿ, ಪತ್ರಿಕಾ ವಿತರಕ ಲಕ್ಷ್ಮಿ ನರಸಪ್ಪ ಅವರಿಗೆ ಸಮಾರಂಭದಲ್ಲಿ ಅಭಿನಂದಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News