ಬೆಂಗಳೂರು | ನಕಲಿ ಇಎಸ್‍ಐ ಕಾರ್ಡ್ ಜಾಲ : ಐವರ ಬಂಧನ

Update: 2024-11-19 14:09 GMT

ಸಾಂದರ್ಭಿಕ ಚಿತ್ರ(Meta AI)

ಬೆಂಗಳೂರು : ನಕಲಿ ಎಂಪ್ಲಾಯ್ಮೆಂಟ್ ಸ್ಟೇಟ್ ಇನ್ಶುರೆನ್ಸ್ (ಇಎಸ್‍ಐ), ಇ-ಪೆಹಚಾನ್ ಕಾರ್ಡ್‍ಗಳನ್ನು ಸೃಷ್ಟಿಸಿ ಸರಕಾರದ ಬೊಕ್ಕಸಕ್ಕೆ ವಂಚಿಸುತ್ತಿದ್ದ ಐವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ರಾಜಾಜಿನಗರದ ಇಎಸ್‍ಐ ಆಸ್ಪತ್ರೆಯ ಭದ್ರತಾ ಸಿಬ್ಬಂದಿ ಶ್ರೀಧರ್, ಕ್ಯಾಂಟೀನ್ ಮಾಲಕ ರಮೇಶ್, ರಾಮಯ್ಯ ಆಸ್ಪತ್ರೆಯ ಮಾಜಿ ನೌಕರ ಶಿವಲಿಂಗ, ಶ್ವೇತಾ, ಆಡಿಟರ್ ಶಶಿಕಲಾ ಬಂಧಿತರು ಎಂದು ಪೊಲೀಸರು ಹೇಳಿದ್ದಾರೆ.

ನಕಲಿ ಹೆಸರುಗಳಲ್ಲಿ ಭೌತಿಕವಾಗಿ ಅಸ್ತಿತ್ವದಲ್ಲಿರದ ಕಂಪೆನಿಗಳನ್ನು ಸರಕಾರಿ ವೆಬ್‍ಸೈಟ್‍ನಲ್ಲಿ ಅವುಗಳನ್ನು ನೋಂದಣಿ ಮಾಡುತ್ತಿದ್ದರು. ಬಳಿಕ ಆಸ್ಪತ್ರೆಗೆ ಬರುವ ಆರ್ಥಿಕ ಸಂಕಷ್ಟದಲ್ಲಿರುವ ಸಾರ್ವಜನಿಕರು, ರೋಗಿಗಳಿಂದ ಹಣ ಪಡೆದು ಆ ನಕಲಿ ಕಂಪೆನಿಗಳಿಗೆ ಅವರನ್ನು ನೌಕರರೆಂದು ತೋರಿಸಿ ಇಎಸ್‍ಐ ಕಾರ್ಡ್ ಕೊಡುತ್ತಿದ್ದರು ಎನ್ನಲಾಗಿದೆ.

ಪ್ರತಿಯಾಗಿ 10 ಸಾವಿರದಿಂದ 2 ಲಕ್ಷದವರೆಗೂ ಹಣ ಪಡೆದುಕೊಳ್ಳುತ್ತಿದ್ದರು. ನಂತರ ಆ ಕಾರ್ಡ್‍ಗಳಿಗೆ ಸರಕಾರಕ್ಕೆ ಪಾವತಿಸಬೇಕಿರುವ ಹಣವೆಂದು ಪ್ರತಿ ತಿಂಗಳು 500 ರೂ. ಪಡೆದುಕೊಂಡು 280 ರೂ. ಹಣ ಪಾವತಿಸಿ ಉಳಿದ 220 ರೂ. ವಂಚಿಸುತ್ತಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಗೊತ್ತಾಗಿದೆ ಎಂದು ತಿಳಿದು ಬಂದಿದೆ.

ಈ ಕುರಿತು ಪ್ರತಿಕ್ರಿಯಿಸಿದ ನಗರ ಪೊಲೀಸ್ ಆಯುಕ್ತ ದಯಾನಂದ್, ಬಂಧಿತ ಆರೋಪಿಗಳು 2 ವರ್ಷಗಳಿಂದಲೂ ಸುಮಾರು 869 ಜನರಿಗೆ ನಕಲಿ ಇಎಸ್‍ಐ, ಇ-ಪೆಹಚಾನ್ ಕಾರ್ಡ್‍ಗಳನ್ನು ಮಾಡಿಸಿಕೊಟ್ಟಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ. ಬಂಧಿತರಿಂದ ನಕಲಿ ಕಂಪೆನಿಗಳು ಹಾಗೂ ವಿವಿಧ ಆಸ್ಪತ್ರೆಯ ವೈದ್ಯರುಗಳ ಸೀಲ್‍ಗಳು, 4 ಲ್ಯಾಪ್‍ಟಾಪ್‍ಗಳು, 59,500 ರೂ. ನಗದು, ನಕಲಿ ಕಾರ್ಡ್‍ಗಳನ್ನ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News