ಸಂವಿಧಾನ ದೇಶದ ಪ್ರತಿಯೊಬ್ಬನ ಸಂವೇದನೆ : ಜ್ಞಾನಪ್ರಕಾಶ ಸ್ವಾಮೀಜಿ

Update: 2024-11-26 17:29 GMT

ಬೆಂಗಳೂರು : ಭಾರತೀಯ ಸಂವಿಧಾನವು ಕೇವಲ ದಾಖಲೆಯ ಪುಸ್ತಕವಲ್ಲ, ಸಂವಿಧಾನವೆಂದರೆ ಪ್ರತಿಯೊಬ್ಬ ಭಾರತೀಯನ ಸಂವೇದನೆಯಾಗಿದೆ ಎಂದು ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.

ಮಂಗಳವಾರ ನೃಪತುಂಗ ರಸ್ತೆಯಲ್ಲಿರುವ ಯವನಿಕ ಸಭಾಂಗಣದಲ್ಲಿ ಆಯೋಜಿಸಿದ್ದ ರಾಜ್ಯ ಪರಿಶಿಷ್ಟ ಜಾತಿ-ಪಂಗಡ ವಕೀಲರ ಸಂಘದ ಉದ್ಘಾಟನೆ ಹಾಗೂ ಸಂವಿಧಾನ ಸಮರ್ಪಣಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಸರ್ವರಿಗೆ ಸಮಬಾಳು, ಸರ್ವರಿಗೆ ಸಮಪಾಲು ನೀಡಿದ ಸಂವಿಧಾನವನ್ನು ಡಾ. ಬಿ. ಆರ್. ಅಂಬೇಡ್ಕರ್ ದೇಶಕ್ಕೆ ನೀಡಿದ್ದಾರೆ. ಭಾರತದ ಚರಿತ್ರೆ ಗೊತ್ತಿಲ್ಲದಿದ್ದರೆ, ಭಾರತೀಯ ಸಂವಿಧಾನ ಅರ್ಥವಾಗುವುದಿಲ್ಲ ಎಂದರು.

ಧರ್ಮ ಆಧಾರಿತ, ಜಾತಿ ಆಧಾರಿತ ದೇಶವನ್ನಾಗಿ ಭಾರತವನ್ನು ಮಾಡಿದರೆ ಸಂವಿಧಾನವನ್ನು ಕಳೆದುಕೊಳ್ಳುತ್ತೇವೆ. ಸಂವಿಧಾನ ನೀಡಿರುವ ಸ್ವಾತಂತ್ರ್ಯ, ಸಮಾನತೆಯನ್ನು ಕಳೆದುಕೊಳ್ಳುತ್ತೇವೆ. ಪ್ರಜಾಪ್ರಭುತ್ವದಲ್ಲಿ ವ್ಯಕ್ತಿ ಆರಾಧನೆ ಇರಬಾರದು. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಒಬ್ಬರ ಕೈಯಲ್ಲಿದ್ದರೆ, ಪ್ರಜಾಪ್ರಭುತ್ವ ಹಾಳಾಗಿ, ಸರ್ವಾಧಿಕಾರ ಬರುತ್ತದೆ ಎಂದು ಅವರು ಹೇಳಿದರು.

ಸಂವಿಧಾನ ಪೀಠಿಕೆ ಆಶಯಗಳನ್ನು ಪಾಲನೆ ಮಾಡಲೇಬೇಕು. ಏಕೆಂದರೆ ದೇಶದ ಇತ್ತೀಚಿನ ಪರಿಸ್ಥಿತಿ ನೋಡುತ್ತಿದ್ದರೆ, ಪ್ರಜೆಗಳಿಂದ ಪ್ರಜೆಗಳಿಗೋಸ್ಕರ ಇಲ್ಲವಾಗಿದೆ. ಬದಲಾಗಿ ಕೆಲವರಿಂದ ಕೆಲವರಿಗಾಗಿ ನಡೆಯುತ್ತಿರುವ ಸರಕಾರ ಈ ದೇಶದಲ್ಲಿದೆ. ಇಂದು ಮನುಷ್ಯ ಮನುಷ್ಯನನ್ನು ಕೊಲೆ ಮಾಡುತ್ತಿದ್ದಾನೆ. ಇದು ಆದರ್ಶ ಭಾರತವಾಗುತ್ತದೆಯೇ, ಇದು ಆಯುಧಗಳ ಭಾರತವಾಗುತ್ತಿದೆ. ದೇಶದಲ್ಲಿ ಆರು ನಿಮಿಷಕ್ಕೆ ಒಂದು ಅತ್ಯಾಚಾರ, ಹತ್ತು ನಿಮಿಷಕ್ಕೆ ಒಂದು ಬೆಂಕಿ ಇಡುವ ಪ್ರಕರಣಗಳು ನಡೆಯುತ್ತಿವೆ ಎಂದು ಅವರು ತಿಳಿಸಿದರು.

ಭಾರತದ ಹೆಸರಾಂತ ವಕೀಲ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಯನ್ನು ಸುಪ್ರೀಂ ಕೋರ್ಟ್ ಅಂಗಳಕ್ಕೆ ಬರಲು 75 ವರ್ಷ ಬೇಕಾಯಿತು. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರು ಮಾತ್ರವಲ್ಲದೆ ಭಾರತೀಯ ಪ್ರತಿಯೊಬ್ಬರು ಡಾ. ಬಿ.ಆರ್. ಅಂಬೇಡ್ಕರ್‍ರನ್ನು ನೆನಪಿಸಿಕೊಳ್ಳಬೇಕು ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಹೈಕೋರ್ಟ್‍ನ ನ್ಯಾಯಮೂರ್ತಿಗಳಾದ ಕೆ.ಸೋಮಶೇಖರ್, ಕೃಷ್ಣ ಎಸ್.ದೀಕ್ಷೀತ್, ಹೆಚ್ಚುವರಿ ಅಡ್ವೊಕೇಟ್ ಎಸ್.ಎ.ಅಹಮದ್ ಸೇರಿದಂತೆ ಮತ್ತಿತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News