ಸಿಎಂ ಕುಟುಂಬಕ್ಕೆ ಮುಡಾ ಸೈಟ್ ಹಂಚಿಕೆ ಆರೋಪ: ಸಿಬಿಐ ತನಿಖೆಗೆ ಕೋರಿದ್ದ ಅರ್ಜಿ ವಿಚಾರಣೆ ಡಿ.10ಕ್ಕೆ ನಿಗದಿ

Update: 2024-11-26 06:13 GMT

Photo: wikipedia

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಿಂದ ತಮ್ಮ ಕುಟುಂಬದ ಸದಸ್ಯರರಿಗೆ ಬದಲಿ ನಿವೇಶನ ಹಂಚಿಕೆ ಆರೋಪಕ್ಕೆ ಸಂಬಂಧಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಪ್ರಕರಣವನ್ನು ಕೇಂದ್ರೀಯ ತನಿಖಾ ದಳ(ಸಿಬಿಐ)ಕ್ಕೆ ವಹಿಸಬೇಕು ಎಂದು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಡಿಸೆಂಬರ್ 10ಕ್ಕೆ ನಿಗದಿಪಡಿಸಿದೆ.

ಮೈಸೂರಿನ ಸಾಮಾಜಿಕ ಕಾರ್ಯಕರ್ತ ಹಾಗೂ ಪ್ರಕರಣದ ದೂರುದಾರ ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ವಿಚಾರಣೆ ಆರಂಭವಾದ ಸಂದರ್ಭದಲ್ಲಿ ಜಮೀನಿನ ಮೂಲ ಮಾಲಕ ದೇವರಾಜು ಅವರ ಪರ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದ ಸುಪ್ರೀಂ ಕೋರ್ಟ್ ಹಿರಿಯ ವಕೀಲ ದುಶ್ಯಂತ್ ದವೆ, 'ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದ ರಾಜ್ಯಪಾಲರ ಆದೇಶ ಎತ್ತಿ ಹಿಡಿರುವ ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿದೆ. ಈ ಅರ್ಜಿಯ ವಿಚಾರಣೆ ಡಿಸೆಂಬರ್ 5ಕ್ಕೆ ನಿಗದಿಯಾಗಿದೆ. ಈ ನಿಟ್ಟಿನಲ್ಲಿ ಸಿಬಿಐ ತನಿಖೆ ಕೋರಿರುವ ಅರ್ಜಿಯ ವಿಚಾರಣೆಯನ್ನು ಡಿಸೆಂಬರ್ 5ರ ನಂತರ ನಿಗದಿಪಡಿಸಬೇಕು ಎಂದು ಪೀಠಕ್ಕೆ ಮನವಿ ಮಾಡಿದರು.

ಈ ವೇಳೆ ದೂರುದಾರ/ಅರ್ಜಿದಾರ ಸ್ನೇಹಮಹಿ ಕೃಷ್ಣ ಪರ ವಕೀಲರಾದ ಕೆ.ಜಿ.ರಾಘವನ್, ವಿಚಾರಣೆ ಮುಂದೂಡುವುದಕ್ಕೂ ಮುನ್ನ ತನಿಖೆ ನಡೆಸಿರುವುದಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಒಮ್ಮೆ ಪರಿಶೀಲಿಸಬೇಕು ಎಂದು ಪೀಠಕ್ಕೆ ಮನವಿ ಮಾಡಿದರು. ಈ ವೇಳೆ ದುಷ್ಯಂತ್ ದವೆ, 'ಇದು ಅನ್ಯಾಯದ ನಡೆ, ಸರಿಯಾದ ಕ್ರಮವಲ್ಲ' ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಈ ವೇಳೆ ಪೀಠ, ಇಂದು ಅರ್ಜಿಯ ವಿಚಾರಣೆ ನಡೆಸುತ್ತಿಲ್ಲ. ಹೀಗಾಗಿ ದಾಖಲೆ ಪರಿಶೀಲನೆ ನಡೆಸುವ ಅಗತ್ಯವಿಲ್ಲ ಎಂದು ತಿಳಿಸಿ ವಿಚಾರಣೆಯನ್ನು ಡಿಸೆಂಬರ್ 10ರಂದು ಅಪರಾಹ್ನ 2:30ಕ್ಕೆ ನಿಗದಿಪಡಿಸಿ ಆದೇಶಿಸಿತು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News