ಸಂವಿಧಾನವು ಪ್ರಜಾಪ್ರಭುತ್ವ ವ್ಯವಸ್ಥೆಯ ಪಾಲಿಗೆ ಒಂದು ಧರ್ಮಗ್ರಂಥ : ವಿಜಯೇಂದ್ರ
ಬೆಂಗಳೂರು : ‘ಸ್ವಾತಂತ್ರ್ಯ ಬಂದಾಗಿನಿಂದ ದೇಶದ ಆಡಳಿತದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಹಲವು ಬಾರಿ ಸಂವಿಧಾನಕ್ಕೆ ತಿದ್ದುಪಡಿ ಮಾಡಿದೆ. ಅಲ್ಲದೆ, ಸಂವಿಧಾನದ ದುರುಪಯೋಗ ಪಡಿಸಿಕೊಂಡು ತುರ್ತು ಪರಿಸ್ಥಿತಿ ಹೇರುವ ಹೇಯ ಕೃತ್ಯಕ್ಕೆ ಕಾಂಗ್ರೆಸ್ ನೇತೃತ್ವದಲ್ಲಿ ಆಗಿದೆ ಎಂಬುದನ್ನು ದೇಶ-ರಾಜ್ಯದ ಜನರು ಮರೆತಿಲ್ಲ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ಮಂಗಳವಾರ ಸಂವಿಧಾನ ದಿನಾಚರಣೆಯ ಪ್ರಯುಕ್ತ ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯದಲ್ಲಿ ಸಂವಿಧಾನ ಸನ್ಮಾನ ಅಭಿಯಾನ ಉದ್ಘಾಟಿಸಿ ಮಾತನಾಡಿದ ಅವರು. ಹಿಂದೆ ಕಾನೂನು ದಿನವನ್ನಾಗಿ ಇದನ್ನು ಆಚರಿಸಲಾಗುತ್ತಿತ್ತು. ಇದನ್ನು ಸಂವಿಧಾನ ಸಮರ್ಪಣಾ ದಿನವಾಗಿ ಅರ್ಥಪೂರ್ಣವಾಗಿ ಆಚರಿಸುವ ಅಭಿಲಾಷೆ ದೇಶದ ಹೆಮ್ಮೆಯ ಪ್ರಧಾನಿ ಮೋದಿ ಅವರದು ಎಂದು ತಿಳಿಸಿದರು.
ಡಾ.ಅಂಬೇಡ್ಕರರ ಪರಿಶ್ರಮ, ಬೆವರಿನ ಫಲಶ್ರುತಿಯ ಫಲವಾಗಿ ಸಮಾನತೆ, ಸ್ವಾವಲಂಬನೆ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಂವಿಧಾನದ ಮೂಲಕ ಕೊಡಲಾಗಿದೆ. ಸಂವಿಧಾನವು ಪ್ರಜಾಪ್ರಭುತ್ವ ವ್ಯವಸ್ಥೆಯ ಪಾಲಿಗೆ ಒಂದು ಧರ್ಮಗ್ರಂಥ ಎಂದು ವಿಶ್ಲೇಷಿಸಿದರು. ನಮ್ಮೆಲ್ಲರ ನೇತೃತ್ವದಲ್ಲಿ ಸಂವಿಧಾನಕ್ಕೆ ಗೌರವ ಕೊಡುವ ಕೆಲಸ ಆಗಬೇಕಿದೆ ಎಂದು ಅವರು ತಿಳಿಸಿದರು. ಸಂವಿಧಾನವನ್ನು ರಕ್ಷಿಸುವ ಕರ್ತವ್ಯ ಪ್ರತಿಯೊಬ್ಬ ಭಾರತೀಯರದು ಎಂದು ಅವರು ನುಡಿದರು.
ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ಸ್ವಾತಂತ್ರ್ಯ ನಂತರದಲ್ಲಿ ಸಂವಿಧಾನ ರಚನೆ ದೊಡ್ಡ ಸವಾಲಾಗಿತ್ತು. ಆಗ ಸಂವಿಧಾನ ಸಮಿತಿಯು ಸುದೀರ್ಘ- ಎಲ್ಲ ಆಯಾಮಗಳಲ್ಲಿ ಚರ್ಚೆ ಮಾಡಿ, ಬಾಬಾಸಾಹೇಬ ಅಂಬೇಡ್ಕರರ ಮಾನವೀಯ ತತ್ವಗಳನ್ನು ಸೇರಿಸಿದ್ದರಿಂದ ನಮ್ಮ ಸಂವಿಧಾನವು ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಸಂವಿಧಾನ ಎನಿಸಿದೆ ಎಂದರು.
ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಸರ್ವರಿಗೂ ಸಮಾನ ಅವಕಾಶ ನೀಡುವ ಸಂವಿಧಾನವನ್ನು ಡಾ.ಅಂಬೇಡ್ಕರರು ನೀಡಿದ್ದು, ಅದು ಸಾರ್ವಕಾಲಿಕ, ಸದಾ ಪ್ರಸ್ತುತ ಎಂದು ವಿವರಿಸಿದರು. ಸಂವಿಧಾನದ ಕುರಿತು ಅಪಸ್ವರ ಬರಬಾರದು ಎಂದು ತಿಳಿಸಿದರು.