ಆ.27ಕ್ಕೆ ‘ಕೆಎಎಸ್ ಪೂರ್ವಭಾವಿ ಪರೀಕ್ಷೆ’ | ಅಭ್ಯರ್ಥಿಗಳ ಆಕ್ರೋಶ

Update: 2024-08-23 15:46 GMT

ಬೆಂಗಳೂರು : ಕೆಎಎಸ್ ಪೂರ್ವಭಾವಿ ಪರೀಕ್ಷೆಯನ್ನು ರಜೆ ದಿನವಲ್ಲದ ಆ.27ಕ್ಕೆ ನಿಗದಿಪಡಿಸಿದ್ದು, ತರಾತುರಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ಕೆಪಿಎಸ್‍ಸಿ ನಡೆಸುತ್ತಿದೆ. ಈ ನಿರ್ಧಾರದಿಂದ ಬಹುತೇಕ ಅಭ್ಯರ್ಥಿಗಳಿಗೆ ತೊಂದರೆಯಾಗುತ್ತದೆ ಎಂದು ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಉದ್ಯೋಗಕಾಂಕ್ಷಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹುದ್ದೆಗಳ ಪೂರ್ವಭಾವಿ ಪರೀಕ್ಷೆಯನ್ನು ಸುಮಾರು 2,10,910 ಅಭ್ಯರ್ಥಿಗಳು ಬರೆಯಲಿದ್ದಾರೆ. ಆದರೆ ತರಾತುರಿಯಲ್ಲಿ ದಿನಾಂಕ ಘೋಷಣೆ ಮಾಡಲಾಗಿದೆ. ಈ ಮೊದಲು ಆ.25ಕ್ಕೆ ಕೆಎಎಸ್ ಪೂರ್ವಭಾವಿ ಪರೀಕ್ಷೆ ನಿಗದಿಯಾಗಿತ್ತು. ಆದರೆ ಆ.25ಕ್ಕೆ ಐಬಿಪಿಎಸ್ ಪರೀಕ್ಷೆ ಇರುವ ಕಾರಣ ದಿನಾಂಕದಲ್ಲಿ ಬದಲಾವಣೆ ಮಾಡಲಾಗಿದೆ. ಬದಲಾವಣೆ ಮಾಡಿದ ದಿನಾಂಕದಿಂದಲೂ ಅಭ್ಯರ್ಥಿಗಳಿಗೆ ಸಮಸ್ಯೆ ಎದುರಾಗಿದೆ ಎಂದು ಅಭ್ಯರ್ಥಿಗಳು ಹೇಳಿದ್ದಾರೆ.

ಮಂಗಳವಾರ ಖಾಸಗಿ ಕಂಪನಿಯವರಿಗೆ ರಜೆ ಇರುವುದಿಲ್ಲ. ಅಂಧ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಸಹಾಯಕರು ಸಿಗುವುದಿಲ್ಲ. ಹೀಗಾಗಿ ರಜೆ ದಿನಗಳನ್ನು ನೋಡಿಕೊಂಡು ಪರೀಕ್ಷೆಗೆ ದಿನಾಂಕ ನಿಗದಿ ಮಾಡಬೇಕು. ಜೊತೆಗೆ ಬೆಂಗಳೂರಿನ ಅಭ್ಯರ್ಥಿಗಳಿಗೆ ಚಿತ್ರದುರ್ಗ ಪರೀಕ್ಷಾ ಸೆಂಟರ್, ಬೆಳಗಾವಿ ಅಭ್ಯರ್ಥಿಗಳಿಗೆ ಮೈಸೂರು ಕೇಂದ್ರ ಹಾಕಿದ್ದಾರೆ. 200-300 ಕಿಲೋ ಮೀಟರ್ ದೂರದ ಸೆಂಟರ್ ಹಾಕಿದ್ದಾರೆ ಎಂದು ಅಭ್ಯರ್ಥಿಗಳು ಅಳಲು ತೋಡಿಕೊಂಡಿದ್ದಾರೆ.

ನಾಳೆ ಪ್ರತಿಭಟನೆ: ಇಂದು(ಆ.24) ನಗರದ ಫ್ರೀಡಂ ಪಾರ್ಕ್‍ನಲ್ಲಿ ಪರೀಕ್ಷೆಯನ್ನು ಮುಂದೂಡುವಂತೆ ಒತ್ತಾಯಿಸಿ ಆಲ್ ಕರ್ನಾಟಕ ಸ್ಟೇಸ್ ಸ್ಟೂಡೆಂಟ್ಸ್ ಅಸೋಸಿಯೇಷನ್‍ನ ಧರಣಿಯನ್ನು ನಡೆಸುವುದಾಗಿ ತಿಳಿಸಿದೆ. ಧರಣಿಯಲ್ಲಿ ಸಾವಿರಾರು ಜನರು ಭಾಗವಹಿಸುವ ಸಾಧ್ಯತೆ ಇದೆ ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News