ಕೇಂದ್ರ ಸರಕಾರ ಮೇಕೆದಾಟು ಯೋಜನೆಗೆ ಅನುಮತಿ ನೀಡಲಿ: ಡಿಸಿಎಂ ಡಿ.ಕೆ. ಶಿವಕುಮಾರ್
ಬೆಂಗಳೂರು: ಬೆಂಗಳೂರಿನಲ್ಲಿ ಈ ರೀತಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಾರದು ಎಂಬ ಕಾರಣಕ್ಕೆ ನಾವು ಮೇಕೆದಾಟು ಯೋಜನೆಗೆ ಆಗ್ರಹಿಸಿ ನೀರಿಗಾಗಿ ನಡಿಗೆ ಪಾದಯಾತ್ರೆ ಮಾಡಿದೆವು. ಬೆಂಗಳೂರಿನ ಪರಿಸ್ಥಿತಿಯನ್ನು ಕಂಡು ಕೇಂದ್ರ ಸರಕಾರ ಈಗಲಾದರೂ ಮೇಕೆದಾಟು ಯೋಜನೆಗೆ ಅನುಮತಿ ನೀಡಿ ಸಮಸ್ಯೆಗೆ ಪರಿಹಾರ ನೀಡಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒತ್ತಾಯಿಸಿದರು.
ಮಂಗಳವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ರಾಜ್ಯದ ಬರ ಪರಿಸ್ಥಿತಿ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿಸಿ ಸಿಇಒಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ನಾವು ನೀರಿನ ವಿಚಾರವಾಗಿ ಬಹಳ ಸಂದಿಗ್ಧ ಪರಿಸ್ಥಿತಿ ಎದುರಿಸುತ್ತಿದ್ದು, ಏನಾದರೂ ಆಗಲಿ ಬೆಂಗಳೂರಿಗೆ ನೀರನ್ನು ಒದಗಿಸುತ್ತೇವೆ. ಬರ ಪರಿಸ್ಥಿತಿಯಲ್ಲಿ ನೀರಿನ ಅಭಾವವನ್ನು ನೀಗಿಸಲು. ಮುಖ್ಯಮಂತ್ರಿ, ಕಂದಾಯ ಸಚಿವರು, ಗ್ರಾಮೀಣಾಭಿವೃದ್ಧಿ ಸಚಿವರು ಸೇರಿದಂತೆ ಎಲ್ಲ ಸಚಿವರು ಹಾಗೂ ಅಧಿಕಾರಿಗಳು ಚರ್ಚೆ ಮಾಡಿದ್ದೇವೆ. ನಗರದಲ್ಲಿ ನೀರು ಇಲ್ಲದಿದ್ದರೆ 15 ಕಿ.ಮೀ ಸುತ್ತಮುತ್ತಲ ನೀರಿನ ಮೂಲಗಳನ್ನು ಬಳಸಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದು ಅವರು ಹೇಳಿದರು.
ಇದೇ ರೀತಿ ಬೆಂಗಳೂರಿನಲ್ಲೂ ಕುಡಿಯುವ ನೀರು ಕೊರತೆ ನೀಗಿಸಲು ಹೊಸಕೋಟೆ, ರಾಮನಗರ, ಚನ್ನಪಟ್ಟಣ, ಮಾಗಡಿ, ರಾಮನಗರದಿಂದ ದೊಡ್ಡ ಟ್ಯಾಂಕರ್ ನಲ್ಲಿ ನೀರು ತರಲು ಸೂಚಿಸಿದ್ದೇವೆ. ಕೆಲವು ಟ್ಯಾಂಕರ್ ಗಳು 600 ರೂ.ಗಳಿಗೆ ನೀರು ನೀಡುತ್ತಿದ್ದಾರೆ. ಮತ್ತೆ ಕೆಲವರು 3 ಸಾವಿರ ರೂ.ಗಳಿಗೆ ನೀಡುತ್ತಿದ್ದಾರೆ. ಹೀಗಾಗಿ ಎಲ್ಲರನ್ನೂ ನೋಂದಣಿ ಮಾಡಿಕೊಂಡು, ನಂತರ ಒಂದು ವ್ಯವಸ್ಥೆ ಮಾಡಲಾಗುವುದು. ನೀರನ್ನು ಎಷ್ಟು ದೂರದಿಂದ ತರಲಾಗಿದೆ ಎಂದು ನೋಡಿ ದರ ನಿಗದಿ ಮಾಡುತ್ತೇವೆ ಎಂದು ಶಿವಕುಮಾರ್ ಹೇಳಿದರು.
ನೀರಿನ ಟ್ಯಾಂಕರ್ ವಶಕ್ಕೆ ತೆಗೆದುಕೊಳ್ಳುವುದರಿಂದ ಕೆಲವು ಅಪಾರ್ಟ್‌ಮೆಂಟ್ ಗಳಿಗೆ ಸಮಸ್ಯೆ ಎದುರಾಗಲಿದೆ ಎಂಬ ವಿಚಾರವಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾವು ಎಲ್ಲರಿಗೂ ನೆರವು ನೀಡುತ್ತೇವೆ. ಅಪಾರ್ಟ್‌ಮೆಂಟ್ ಗಳಿಗೂ ನಾವು ನೀರನ್ನು ಪೂರೈಸುತ್ತೇವೆ. ಅಪಾರ್ಟ್‌ಮೆಂಟ್ ನಿವಾಸಿಗಳಾಗಲಿ, ಕೊಳಗೇರಿ ನಿವಾಸಿಗಳಾಗಲಿ ಎಲ್ಲರಿಗೂ ನೆರವಾಗುವುದು ನಮ್ಮ ಕರ್ತವ್ಯ ಎಂದು ತಿಳಿಸಿದರು.
ಡಿಸಿಎಂ ಹಾಗೂ ಸಿಎಂ ಕಚೇರಿಗೆ ಬೆದರಿಕೆ ಇ-ಮೇಲ್: ನಿಮಗೆ ಹಾಗೂ ಮುಖ್ಯಮಂತ್ರಿ ಕಚೇರಿಗೆ ಬೆದರಿಕೆ ಇ-ಮೇಲ್ ಬಂದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ಎರಡು ಮೂರು ದಿನಗಳ ಹಿಂದೆಯೆ ಇ-ಮೇಲ್ ಬಂದಿದ್ದು, ಇದನ್ನು ಬಹಿರಂಗಗೊಳಿಸಿರಲಿಲ್ಲ. ಈ ಬಗ್ಗೆ ತನಿಖೆ ನಡೆಸಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದು ತಿಳಿಸಿದರು.
ಇ-ಮೇಲ್ ಮೂಲಕ ನಮಗೆ 5 ಮಿಲಿಯನ್ ಡಾಲರ್ ಹಣ ಹಾಕದಿದ್ದರೆ ಬಸ್, ರೈಲು, ದೇವಾಲಯ, ಹೋಟೆಲ್ ಸೇರಿದಂತೆ ಕರ್ನಾಟಕದಾದ್ಯಂತ ಸ್ಫೋಟ ನಡೆಸುತ್ತೇವೆ. ಅಂಬಾರಿ ಉತ್ಸವ್ ಬಸ್ ಸ್ಫೋಟಗೊಳಿಸಿ ಮತ್ತೊಂದು ಟ್ರೇಲರ್ ತೋರಿಸುತ್ತೇವೆ. ನಂತರ ನಮ್ಮ ಬೇಡಿಕೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ತಿಳಿಸುತ್ತೇವೆ ಎಂದು ಎರಡು ಮೇಲ್ ಗಳಲ್ಲಿ ತಿಳಿಸಲಾಗಿದೆ. ಇದು ಬೋಗಸ್ ಅಥವಾ ನಿಜವೋ ಗೊತ್ತಿಲ್ಲ. ನಾವು ಮೇಲ್ ಬಂದ ಕೂಡಲೇ ಪೊಲೀಸರಿಗೆ ಕಳುಹಿಸಿದ್ದು ಅವರು ತನಿಖೆ ನಡೆಸುತ್ತಿದ್ದಾರೆ ಎಂದು ಅವರು ತಿಳಿಸಿದರು.