ಪೊಲೀಸ್ ವಶದಲ್ಲಿದ್ದ ಯುವಕನ ಮೃತ್ಯು ಪ್ರಕರಣ | ತುರ್ತು ತನಿಖೆಗೆ ಮಾನವ ಹಕ್ಕುಗಳ ಆಯೋಗಕ್ಕೆ ಪತ್ರ

Update: 2024-05-25 14:13 GMT

ಚೆನ್ನಗಿರಿ ಪೊಲೀಸ್‌ ಠಾಣೆ ಮುಂಭಾಗ ನೆರೆದಿರುವ ಜನರು

ಬೆಂಗಳೂರು : ಪೊಲೀಸ್ ವಶದಲ್ಲಿದ್ದ ದಾವಣಗೆರೆ ಜಿಲ್ಲೆಯ ಚೆನ್ನಗಿರಿಯ ಆದಿಲ್ ಮೃತ್ಯು ಪ್ರಕರಣವನ್ನು ತಕ್ಷಣವೇ ನಿಷ್ಪಕ್ಷಪಾತ ತನಿಖೆ ಮಾಡಲು ಸಾಮಾಜಿಕ ಸೇವಾ ಸಂಸ್ಥೆ ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್, ಮಾನವ ಹಕ್ಕುಗಳ ಆಯೋಗವನ್ನು ಒತ್ತಾಯಿಸಿದೆ.

ಈ ಕುರಿತು ಶನಿವಾರ ಮಾನವ ಹಕ್ಕುಗಳ ಆಯೋಗಕ್ಕೆ ಪತ್ರ ಬರೆದಿರುವ ಸಂಸ್ಥೆಯು, “ಮೇ 24 ರಂದು ದಾವಣಗೆರೆಯ ಟಿಪ್ಪು ನಗರದ ನಿವಾಸಿ ಆದಿಲ್ ನನ್ನು ಜೂಜಾಡುತ್ತಿದ್ದ ಆರೋಪದಲ್ಲಿ ಪೊಲೀಸರು ಬಂಧಿಸಿದ್ದರು. ಪೊಲೀಸ್ ವಶದಲ್ಲಿದ್ದಾಗಲೇ ಆದಿಲ್ ಮೃತಪಟ್ಟಿದ್ದರು. ಆ ಬಳಿಕ ಘಟನೆ ವಿಕೋಪಕ್ಕೆ ತಿರುಗಿ, ಉದ್ರಿಕ್ತ ಗುಂಪು ಪೊಲೀಸ್ ಕಸ್ಟಡಿಯಲ್ಲಿದ್ದಾಗ ಆದಿಲ್ ಮೃತಪಟ್ಟಿದ್ದಾರೆ ಎಂದು ಆರೋಪಿಸಿ, ಚನ್ನಗಿರಿಯ ಸ್ಥಳೀಯ ಪೊಲೀಸ್ ಠಾಣೆಯನ್ನು ಧ್ವಂಸಗೊಳಿಸಿ, ಹಲವಾರು ವಾಹನಗಳಿಗೆ ಜಖಂ ಗೊಳಿಸಿದ್ದರು. ಘಟನೆ ಸಂಬಂಧ ಪೊಲೀಸ್ ಅಧಿಕಾರಿಗಳ ನಡವಳಿಕೆಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟು ಹಾಕಿದೆ” ಎಂದು ಪತ್ರದಲ್ಲಿ ತಿಳಿಸಿದೆ.

“ಘಟನೆಯ ಬಗ್ಗೆ ನಿಷ್ಪಕ್ಷವಾತವಾಗಿ ಸಂಪೂರ್ಣ ತನಿಖೆ ನಡೆಸಿ, ಆದಿಲ್ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕು. ಆ ಮೂಲಕ ಮಾನವ ಹಕ್ಕುಗಳನ್ನು ಕಾಪಾಡಲು ಮತ್ತು ಎಲ್ಲರಿಗೂ ನ್ಯಾಯವನ್ನು ಒದಗಿಸಲು ಆಯೋಗವು ತನ್ನ ಬದ್ಧತೆಯನ್ನು ಎತ್ತಿಹಿಡಿಯುವ ಭರವಸೆಯಿದೆ” ಎಂದು ಪತ್ರದಲ್ಲಿ ಸಂಸ್ಥೆಯು ಉಲ್ಲೇಖಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News