ಲೋಕಸಭಾ ಚುನಾವಣೆ : 9.35 ಕೋಟಿ ರೂ.ಮೌಲ್ಯದ 30 ಕೆಜಿ ಚಿನ್ನ ವಶ
ಬೆಂಗಳೂರು : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿರುವ ವಾಣಿಜ್ಯ ತೆರಿಗೆ ಇಲಾಖೆಯವರು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಜ್ಜಂಪುರದಲ್ಲಿ 9.35 ಕೋಟಿ ರೂ.ಮೌಲ್ಯದ 30 ಕೆಜಿ ಚಿನ್ನ, 5.98 ಲಕ್ಷ ರೂ.ಮೌಲ್ಯದ 7.59 ಕೆಜಿ ಬೆಳ್ಳಿಯನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ರಾಮನಗರ ಜಿಲ್ಲೆಯ ಹೆಜ್ಜಾಲ ಚೆಕ್‍ಪೋಸ್ಟ್‍ನಲ್ಲಿ 4.11 ಕೋಟಿ ರೂ.ಮೌಲ್ಯದ 6.230 ಕೆಜಿ ಚಿನ್ನ, ಬೆಂಗಳೂರಿನ ಗಾಂಧಿ ನಗರದಲ್ಲಿ ಕ್ಷಿಪ್ರ ಪಡೆಯವರು 10.06 ಲಕ್ಷ ರೂ.ಮೌಲ್ಯದ 22.96 ಕೆಜಿ ಬೆಳ್ಳಿ ಗಟ್ಟಿಗಳನ್ನು ವಶಪಡಿಸಿಕೊಂಡಿದ್ದಾರೆ.
ಬೈಯಪ್ಪನಹಳ್ಳಿಯಲ್ಲಿ ರೈಲ್ವೆ ಪೊಲೀಸ್ ತಂಡದವರು 14.84 ಲಕ್ಷ ರೂ.ಮೌಲ್ಯದ 14.840 ಕೆಜಿ ಗಾಂಜಾ, ಕ್ಷಿಪ್ರ ಪಡೆಯವರು ಕೊಪ್ಪಳ ಜಿಲ್ಲೆಯ ಮುನಿರಾಬಾದ್‍ನಲ್ಲಿ 19 ಲಕ್ಷ ರೂ.ನಗದು, ಸ್ಥಿರ ಕಣ್ಗಾವಲು ತಂಡದವರು 18.83 ಲಕ್ಷ ರೂ.ಮೌಲ್ಯದ ವಿಮಲ್ ಪಾನ್ ಮಸಾಲಾದ 75 ಚೀಲಗಳು ಮತ್ತು ತಂಬಾಕು 75 ಚೀಲಗಳನ್ನು ಬೀದರ್ ಲೋಕಸಭಾ ಕ್ಷೇತ್ರದ ಹಲಬರ್ಗಾ ಚೆಕ್‍ಪೋಸ್ಟ್ ನಲ್ಲಿ ವಶಪಡಿಸಿಕೊಂಡಿದ್ದಾರೆ.
ರಾಮನಗರ ಜಿಲ್ಲೆಯ ಹೆಜ್ಜಾಲ ಚೆಕ್‍ಪೋಸ್ಟ್ ನಲ್ಲಿ ಸ್ಥಿರ ಕಣ್ಗಾವಲು ತಂಡದವರು 21.84 ಲಕ್ಷ ರೂ.ಮೌಲ್ಯದ 28 ಕೆಜಿ ಬೆಳ್ಳಿ, ಅಬಕಾರಿ ಇಲಾಖೆಯವರು ಬೆಂಗಳೂರಿನ ಸಂಜಯನಗರ ಬಳಿ 68.27 ಲಕ್ಷ ರೂ.ಮೌಲ್ಯದ 14,688 ಲೀಟರ್ ಮದ್ಯ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1.08 ಕೋಟಿ ರೂ.ಮೌಲ್ಯದ 9,612 ಲೀಟರ್ ಮದ್ಯ, ಶಿವಮೊಗ್ಗ ಜಿಲ್ಲೆಯ ದೇವಕಾತಿ ಕೊಪ್ಪದಲ್ಲಿ 1.08 ಕೋಟಿ ರೂ.ಮೌಲ್ಯದ 9,531 ಲೀಟರ್ ಮದ್ಯ ವಶಪಡಿಸಿಕೊಂಡಿದ್ದಾರೆ.
ಕ್ಷಿಪ್ರಪಡೆಗಳು, ಸ್ಥಿರ ಕಣ್ಗಾವಲು ತಂಡಗಳು ಮತ್ತು ಪೊಲೀಸ್ ಅಧಿಕಾರಿಗಳು ನಗದು, ಮದ್ಯ, ಡ್ರಗ್ಸ್, ಬೆಲೆಬಾಳುವ ಲೋಹ ಮತ್ತು ಉಚಿತ ಉಡುಗೊರೆ ವಶಪಡಿಸಿಕೊಂಡ ಪ್ರಕರಣಗಳಿಗೆ ಸಂಬಂಧಿಸಿದಂತೆ 1,650 ಎಫ್‍ಐಆರ್ ಗಳನ್ನು ದಾಖಲಿಸಿದ್ದಾರೆ.
ಅಬಕಾರಿ ಇಲಾಖೆಯು ಘೋರ ಅಪರಾಧ ಅಡಿಯಲ್ಲಿ 2,086 ಪ್ರಕರಣಗಳನ್ನು ದಾಖಲಿಸಿದೆ. ಪರವಾನಗಿ ಉಲ್ಲಂಘನೆ ಅಡಿಯಲ್ಲಿ 2,707 ಪ್ರಕರಣ ದಾಖಲಿಸಿದೆ. ಎನ್‍ಡಿಪಿಎಸ್ ಅಡಿಯಲ್ಲಿ 123 ಪ್ರಕರಣಗಳನ್ನು ಮತ್ತು ಕರ್ನಾಟಕ ಅಬಕಾರಿ ಕಾಯ್ದೆ ಅಡಿ 13,833 ಪ್ರಕರಣಗಳನ್ನು ದಾಖಲಿಸಲಾಗಿದೆ ಮತ್ತು 1,263 ವಿವಿಧ ರೀತಿಯ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.