ಬೆಂಗಳೂರು | ತೆರಿಗೆ ಕಡಿತಗೊಳಿಸಲು ಲಂಚ : ಇಬ್ಬರು ಬಿಬಿಎಂಪಿ ಅಧಿಕಾರಿಗಳನ್ನು ಬಂಧಿಸಿದ ಲೋಕಾಯುಕ್ತ
Update: 2024-09-26 17:21 GMT
ಬೆಂಗಳೂರು : ವಾಣಿಜ್ಯ ಕಟ್ಟಡಕ್ಕೆ ತೆರಿಗೆ ಮೊತ್ತದಲ್ಲಿ ಹಣ ಕಡಿತ ಮಾಡಲು 4.5 ಲಕ್ಷ ರೂ. ಲಂಚ ಪಡೆಯುತ್ತಿದ್ದ ವೇಳೆ ಇಬ್ಬರು ಬಿಬಿಎಂಪಿ ಅಧಿಕಾರಿಗಳನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿರುವುದಾಗಿ ವರದಿಯಾಗಿದೆ.
ಚಂದ್ರಶೇಖರ್ ಎಂಬವರು ನೀಡಿದ ದೂರಿನ ಮೇರೆಗೆ ಯಶವಂತಪುರ ಬಿಬಿಎಂಪಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಹಾಯಕ ಕಂದಾಯ ಅಧಿಕಾರಿ(ಎಆರ್‌ಒ) ರಾಜೇಂದ್ರ ಪ್ರಸಾದ್ ಹಾಗೂ ತೆರಿಗೆ ಮೌಲ್ಯಮಾಪಕ ಪ್ರಕಾಶ್ ಎಂಬುವರನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ಯಶವಂತಪುರದಲ್ಲಿ ವಾಸವಾಗಿರುವ ದೂರುದಾರ ಚಂದ್ರಶೇಖರ್ ಅವರಿಗೆ ಆರೋಪಿಗಳು ಕರೆ ಮಾಡಿ, ವಾಣಿಜ್ಯ ಕಟ್ಟಡವೊಂದರ ತೆರಿಗೆ ಹಣ ಕಡಿತಗೊಳಿಸಲು 4.5 ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಗುರುವಾರ 4.5 ಲಕ್ಷ ರೂ. ಲಂಚ ಪಡೆಯುವ ವೇಳೆ ಇಬ್ಬರು ಬಿಬಿಎಂಪಿ ಅಧಿಕಾರಿಗಳು ಸಿಕ್ಕಿಬಿದ್ದಿದ್ದಾರೆ ಎಂದು ಲೋಕಾಯುಕ್ತ ಪೊಲೀಸರು ಮಾಹಿತಿ ನೀಡಿದ್ದಾರೆ.