ರಾಜ್ಯದ ವಿವಿಧೆಡೆ 11 ಅಧಿಕಾರಿಗಳಿಗೆ ಸೇರಿದ 56 ಸ್ಥಳಗಳ ಮೇಲೆ ಲೋಕಾಯುಕ್ತ ದಾಳಿ
ಕಲಬುರಗಿ/ಬೆಳಗಾವಿ : ಕಲಬುರಗಿ, ಮೈಸೂರು, ದಾವಣಗೆರೆ, ಚಿತ್ರದುರ್ಗ, ಧಾರವಾಡ, ಬೆಳಗಾವಿ ಸೇರಿ 9 ಜಿಲ್ಲೆಗಳಲ್ಲಿ 11 ಅಧಿಕಾರಿಗಳಿಗೆ ಸಂಬಂಧಿಸಿದ 56 ಸ್ಥಳಗಳಲ್ಲಿ ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು ನೇತೃತ್ವದಲ್ಲಿ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿ, ದಾಖಲೆಗಳ ಪರಿಶೀಲನೆ ನಡೆಸಿದೆ.
ಬೆಳಗಾವಿ ನಿರ್ಮಿತಿ ಕೇಂದ್ರದ ಯೋಜನಾಧಿಕಾರಿ ಶೇಖರಗೌಡ ಅವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಇವರು ಧಾರವಾಡದಲ್ಲಿ ಎರಡು ಕಡೆ ಪಿಜಿಗಳನ್ನು ಹೊಂದಿದ್ದಾರೆ. ಕೆಸಿಡಿ ರಸ್ತೆಯ ಸಪ್ತಾಪುರ ಹಾಗೂ ರಾಧಾಕೃಷ್ಣ ನಗರದಲ್ಲಿ ಈ ಪಿಜಿಗಳಿದ್ದು, ಎರಡೂ ಸ್ಥಳಗಳಲ್ಲೂ ಏಕಕಾಲಕ್ಕೆ ದಾಳಿ ನಡೆಸಿರುವ ಅಧಿಕಾರಿಗಳು ಪರಿಶೀಲನೆ ನಡೆಸಿರುವುದಾಗಿ ತಿಳಿಸಿದ್ದಾರೆ.
ರಾಮನಗರ ಜಿಲ್ಲೆಯ ಆರೋಹಳ್ಳಿ ತಹಶೀಲ್ದಾರ್ ವಿಜಯಣ್ಣ ಅವರಿಗೆ ಸಂಬಂಧಿಸಿದ ಆರು ಸ್ಥಳಗಳಲ್ಲಿ ದಾಳಿ ನಡೆದಿದೆ. ಚಿಕ್ಕಬಳ್ಳಾಪುರ, ಚಿಂತಾಮಣಿ ಹಾಗು ತುಮಕೂರಿನ ತಲಾ ಎರಡು ಸ್ಥಳಗಳು, ರಾಮನಗರದ ಆರೋಹಳ್ಳಿ ಹಾಗೂ ಮಂಡ್ಯದ ಒಂದೆಡೆ ದಾಳಿ ನಡೆಸಲಾಗಿದೆ. ವಿಜಯಣ್ಣ ಈ ಮೊದಲು ಕೋಲಾರ ತಹಶೀಲ್ದಾರ್ ಆಗಿದ್ದರು. ಕೋಲಾರ ಲೋಕಾಯುಕ್ತ ಎಸ್ಪಿ ಉಮೇಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ದಾಖಲೆಗಳ ಪರಿಶೀಲನೆ ನಡೆಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬಿಬಿಎಂಪಿ ಕೆಂಗೇರಿ ವಿಭಾಗದ ಕಂದಾಯ ಅಧಿಕಾರಿ ಬಸವರಾಜ್ ಮಾಗಿ ಅವರ ಬೆಂಗಳೂರು ಹಾಗು ಕಲಬುರಗಿಯ ಎಂ.ಬಿ.ನಗರದಲ್ಲಿರುವ ನಿವಾಸದ ಮೇಲೂ ದಾಳಿ ನಡೆಸಲಾಗಿದೆ.
ಬೆಳಗಾವಿಯ ಜಿಲ್ಲಾ ಪಂಚಾಯತ್ ಎಇಇ ದುರದುಂಡೇಶ್ವರ ಬನ್ನೂರ ಅವರಿಗೆ ಸೇರಿದ ಸೇರಿದ ನಾಲ್ಕು ಕಡೆಗಳಲ್ಲಿ ಲೋಕಾಯುಕ್ತ ದಾಳಿ ನಡೆದಿದೆ. ಗೋಕಾಕ, ಹೊನಗಾ, ಹಿಂಡಲಗಾ ಹಾಗೂ ಯಳ್ಳೂರ ಸೇರಿ 4 ಕಡೆ ದಾಳಿ ನಡೆದಿದೆ. ಗೋಕಾಕದ ನಿವಾಸ, ಹೊನಗಾ ಫಾರ್ಮ್ ಹೌಸ್, ಯಳ್ಳೂರು ಮನೆ ಹಿಂಡಲಗಾ ಅಪಾರ್ಟ್‍ಮೆಂಟ್‍ಗಳಲ್ಲಿ ದಾಖಲೆಗಳ ಪರಿಶೀಲನೆ ನಡೆಸಲಾಗಿದೆ ಎಂದು ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ
ಮಂಡ್ಯ ನಗರದ ನಿವೃತ್ತ ಎಕ್ಸಿಕ್ಯೂಟಿವ್ ಇಂಜಿನಿಯರ್ ಶಿವರಾಜು ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಎಸ್‍ಪಿ ಸುರೇಶ್ ಬಾಬು ನೇತೃತ್ವದ ತಂಡ ನಗರ ಸೇರಿದಂತೆ ಜಿಲ್ಲೆಯ ನಾಗಮಂಗಲ ತಾಲೂಕಿನ ಇಜ್ಜಲಘಟ್ಟ ಗ್ರಾಮದ ಮನೆ, ಫಾರ್ಮ್‍ಹೌಸ್, ಕ್ರಷರ್ ಹಾಗೂ ಮೈಸೂರಿನ ಶಿವರಾಜು ಅಳಿಯನ ಮನೆ ಸೇರಿದಂತೆ ವಿವಿಧೆಡೆ ಪರಿಶೀಲನೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೈಸೂರು ನಗರದ ನಜರ್ ಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ಸಿ.ಬಡಾವಣೆಯಲ್ಲಿ ನೀರಾವರಿ ಇಲಾಖೆಯ ಇಂಜಿನಿಯರ್ ಕೆ.ಮಹೇಶ್ ಅವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಕೆ.ಮಹೇಶ್ ಕಾರ್ಯ ನಿರ್ವಹಿಸುವ ಗೋಕುಲಂನಲ್ಲಿರುವ ಕಾವೇರಿ ನೀರಾವರಿ ನಿಗಮದ ಕಚೇರಿ ಮೇಲೆ ದಾಳಿ ಮಾಡಿ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲನೆ ನಡೆಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ದಾವಣಗೆರೆ ನಗರದಲ್ಲಿ ಕೆಪಿಟಿಸಿಎಲ್ ಕಾರ್ಯನಿರ್ವಾಹಕ ಇಂಜಿನಿಯರ್ ಡಿ.ಎಚ್.ಉಮೇಶ್ ಹಾಗೂ ಎಇಇ ಬೆಸ್ಕಾಂ ಜಾಗೃತದಳ ಇಂಜಿನಿಯರ್ ಎಂ.ಎಸ್.ಪ್ರಭಾಕರ್ ಮನೆ ಹಾಗೂ ಕಚೇರಿಗಳು ಸೇರಿ ಒಟ್ಟು 6 ಕಡೆಗಳಲ್ಲಿ ಲೋಕಾ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಡಿ.ಎಚ್.ಉಮೇಶ್ ಅವರ ದಾವಣಗೆರೆ ನಗರದ ಶಿವಕುಮಾರ ಸ್ವಾಮಿ ಬಡಾವಣೆಯ ಎರಡನೇ ಹಂತದಲ್ಲಿರುವ ಮನೆ ಹಾಗೂ ಹಾಲಿ ಸೇವೆಯಲ್ಲಿ ಇರುವ ಚಿಕ್ಕಮಗಳೂರಿನಲ್ಲೂ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಾವಣಗೆರೆ ಬೆಸ್ಕಾಂ ವಿಜಿಲೆನ್ಸ್ ಅಧಿಕಾರಿ ಎಇಇ ಪ್ರಭಾಕರ್ ಅವರ ದಾವಣಗೆರೆ ನಗರದ ಎಂಸಿಸಿ ಬಿ ಬ್ಲಾಕ್ 13ನೇ ಮೇನ್‍ನಲ್ಲಿರುವ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ. ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂ.ಎಸ್.ಕೌಲಾಪೂರೆ ನೇತೃತ್ವದಲ್ಲಿ ಚಿತ್ರದುರ್ಗ, ಹಾವೇರಿ, ಬಳ್ಳಾರಿ ವಿಭಾಗದ ಲೋಕಾಯುಕ್ತ ಅಧಿಕಾರಿಗಳ ಒಟ್ಟು ಆರು ತಂಡಗಳಿಂದ ಏಕಕಾಲಕ್ಕೆ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದಾಳಿಗೊಳಗಾದ ಅಧಿಕಾರಿಗಳ ವಿವರ:
ಬಸವರಾಜ್ ಮಾಗಿ - ಕೆಂಗೇರಿ ಬಿಬಿಎಂಪಿ ರೆವಿನ್ಯೂ ಆಫೀಸರ್, ನಿವೃತ್ತ ಕಾರ್ಯಪಾಲಕ ಅಭಿಯಂತರ.
ಶಿವರಾಜ್ ಎಸ್ - ಕುಡಿಯುವ ನೀರು ಹಾಗೂ ನೈರ್ಮಲ್ಯ ವಿಭಾಗ, ಮಂಡ್ಯ.
ಶೇಖರ್ ಗೌಡ - ಪ್ರಾಜೆಕ್ಟ್ ಮ್ಯಾನೇಜರ್, ಧಾರವಾಡ.
ದುರದುಂಡೇಶ್ವರ ಬನ್ನೂರ - ಅಸಿಸ್ಟೆಂಟ್ ಇಂಜಿನಿಯರ್, ಬೆಳಗಾವಿ.
ಡಿ.ಎಚ್.ಉಮೇಶ್ - ಎಕ್ಸಿಕ್ಯೂಟಿವ್ ಇಂಜಿನಿಯರ್, ದಾವಣಗೆರೆ.
ಎಂ.ಎಸ್.ಪ್ರಭಾಕರ್ - ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್, ದಾವಣಗೆರೆ
ವಿಜಯಣ್ಣ - ಆರೋಹಳ್ಳಿ ತಹಶೀಲ್ದಾರ್.
ಮಹೇಶ್ ಕೆ - ಸೂಪರಿಂಟೆಂಡೆಂಟ್ ಇಂಜಿನಿಯರ್.
ಎಂ.ಎನ್.ಜಗದೀಶ್ - ಗ್ರೇಡ್-1 ಸೆಕ್ರೆಟರಿ, ಹಾಸನ.
ಕೆ.ಜಿ.ಜಗದೀಶ್ - ಸೂಪರಿಂಟೆಂಡೆಂಟ್ ಇಂಜಿನಿಯರ್.
ಎಂ.ರವೀಂದ್ರ- ಚೀಫ್ ಇಂಜಿನಿಯರ್(ನಿವೃತ್ತ) ಲೋಕೋಪಯೋಗಿ ಇಲಾಖೆ