ಬೆಂಗಳೂರು ವಿವಿಗೆ ಲೋಕಾಯುಕ್ತ ತಂಡ ಭೇಟಿ ; ದಾಖಲೆಗಳ ಪರಿಶೀಲನೆ
ಬೆಂಗಳೂರು: ಬೆಂಗಳೂರು ವಿಶ್ವ ವಿದ್ಯಾನಿಲಯದ 9 ವಸತಿ ನಿಲಯಗಳಿಗೆ, 2022ರಲ್ಲಿ ಪೂರೈಕೆ ಮಾಡಲಾಗಿರುವ ಹಾಸಿಗೆ ಮತ್ತು ತಲೆದಿಂಬುಗಳ ಖರೀದಿಯಲ್ಲಿ ಅಕ್ರಮ ಸಂಬಂಧ ತನಿಖೆ ಮಾಡಬೇಕು ಎಂದು ವಿದ್ಯಾರ್ಥಿಗಳು ನೀಡಿದ್ದ ದೂರಿಗೆ ಸಂಬಂಧಿಸಿದಂತೆ ಲೋಕಾಯುಕ್ತ ತಂಡವು ವಿವಿಗೆ ಭೇಟಿ ನೀಡಿ ದಾಖಲೆಗಳ ಪರಿಶೀಲನೆ ನಡೆಸಿತು.
ಈ ಸಂಬಂಧ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿಗಳೊಡನೆ ಲೋಕಾಯುಕ್ತ ತಂಡವು ಸಂಬಂಧಪಟ್ಟ ದಾಖಲೆಗಳನ್ನು ಸಂಗ್ರಹಿಸಿಕೊಂಡು ವಿಚಾರಣೆ ಕೈಗೊಂಡಿದ್ದು, ವಿವಿ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ರಾಮಕೃಷ್ಣಯ್ಯ ಮತ್ತು ದೂರು ನೀಡಿದ್ದ ಸಂಶೋಧನಾ ವಿದ್ಯಾರ್ಥಿಗಳಾದ ತಿಲಕ್ ಡಿ.ಎಂ., ರಾಜೇಶ್ ಎಸ್. ಹೇಳಿಕೆಗಳನ್ನು ಪಡೆದುಕೊಂಡಿದ್ದಾರೆ.
ಮುಂದಿನ ಹಂತದಲ್ಲಿ ಹಾಸಿಗೆ ಮತ್ತು ತಲೆದಿಂಬು ಖರೀದಿಯಲ್ಲಿ ಭಾಗಿ ಆಗಿರುವ ಎಲ್ಲ ಅಧಿಕಾರಿಗಳಿಗೂ ನೋಟಿಸ್ ಜಾರಿ ಮಾಡಿ, ತನಿಖೆಗೆ ಹಾಜರಾಗುವಂತೆ ಆದೇಶ ಹೊರಡಿಸಿ ಮುಂದಿನ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಲೋಕಾಯುಕ್ತ ಅಧಿಕಾರಿ ತಿಳಿಸಿದ್ದಾರೆ.