ಶಾಸಕ ಮುನಿರತ್ನ ವಿರುದ್ಧ ಅ.1ಕ್ಕೆ ‘ದಲಿತ-ಒಕ್ಕಲಿಗರ ಸಮಾವೇಶ’
ಬೆಂಗಳೂರು : ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಇತ್ತೀಚೆಗೆ ಗುತ್ತಿಗೆದಾರರ ಬಳಿ ಲಂಚದ ವ್ಯವಹಾರದ ಸಂದರ್ಭದಲ್ಲಿ ಒಕ್ಕಲಿಗ ಮತ್ತು ದಲಿತ ಸಮುದಾಯವನ್ನು ನಿಂದಿಸಿರುವುದನ್ನು ಖಂಡಿಸಿ ದಲಿತ, ಒಕ್ಕಲಿಗ ಹಾಗೂ ಹಿಂದುಳಿದ ಸಮುದಾಯಗಳ ಸಹಯೋಗದೊಂದಿಗೆ ಅಕ್ಟೋಬರ್ 1ರಂದು ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮುದಾಯದ ಮುಖಂಡರು ಹಾಗೂ ಹೋರಾಟಗಾರರು ತಿಳಿಸಿದ್ದಾರೆ.
ಶುಕ್ರವಾರ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಭೆ ಸೇರಿದ್ದ ಸಮುದಾಯಗಳ ಮುಖಂಡರು, ಸಾಹಿತಿಗಳು, ಚಿಂತಕರು, ಹೋರಾಟಗಾರರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಂದ ಆಯ್ಕೆಯಾದ ಜನಪ್ರತಿಯೊಬ್ಬರು ಈ ರೀತಿಯ ಜಾತಿ ವಿರೋಧಿ ಹೇಳಿಕೆಗಳನ್ನು ಕೊಡುವುದು, ಸಂವಿಧಾನ ವಿರೋಧಿ ಮತ್ತು ಕಾನೂನು ಬಾಹಿರವಾಗಿರುತ್ತದೆ. ಶಾಸಕ ಮುನಿರತ್ನ ಸಮುದಾಯಗಳ ವಿರುದ್ಧ ನೀಡಿದ ಹೇಳಿಕೆಗಳಿಂದ ಒಕ್ಕಲಿಗ ಸಮುದಾಯ ಮತ್ತು ದಲಿತ ಸಮುದಾಯದ ಭಾವನೆಗಳಿಗೆ ಧಕ್ಕೆ ಯುಂಟಾಗಿದೆ ಎಂದು ಹೇಳಿದ್ದಾರೆ.
ಸಭೆಯಲ್ಲಿ ಮೈಸೂರಿನ ಉರಿಲಿಂಗಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ, ದಸಂಸ ಸಂಚಾಲಕ ಮಾವಳ್ಳಿ ಶಂಕರ್, ನಟ ಶ್ರೀನಗರ ಕಿಟ್ಟಿ, ಹೋರಾಟಗಾರರಾದ ಬಿ.ಗೋಪಾಲ್, ಚೆನ್ನಕೃಷ್ಣಪ್ಪ, ಹೆಬ್ಬಾಳ್ ವೆಂಕಟೇಶ್, ಮರಿಯಪ್ಪ, ಬಸವರಾಜ್ ಕೌತಾಳ್, ಹೆಣ್ಣೂರು ಶ್ರೀನಿವಾಸ್, ಒಕ್ಕಲಿಗ ಸಂಘದ ಹನುಮಂತರಾಯಪ್ಪ, ಪ್ರೊ.ಟಿ.ಎಚ್.ಮೂರ್ತಿ, ವಾಣಿ ಕೆ.ಶಿವರಾಮ್, ಚಂದ್ರು ಪೆರಿಯಾರ್ ಮತ್ತಿತರರು ಉಪಸ್ಥಿತರಿದ್ದರು.
‘ದಲಿತ, ಒಕ್ಕಲಿಗ ಸಮುದಾಯಗಳನ್ನು ಅವಮಾನಿಸಿದ ಶಾಸಕ ಮುನಿರತ್ನ ವಿರುದ್ಧ ಎಲ್ಲ ತಳ ಸಮುದಾಯಗಳು ಸೇರಿ ಬೃಹತ್ ಸಮಾವೇಶ ನಡೆಸಲು ತೀರ್ಮಾನಿಸಿದ್ದು, ಮುನಿರತ್ನರನ್ನು ಶಾಸಕ ಸ್ಥಾನದಿಂದ ಅಮಾನತುಗೊಳಿಸಿ, ಗಡಿಪಾರು ಮಾಡಬೇಕು. ಈ ಕುರಿತು ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು. ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಎಸ್‍ಸಿ-ಎಸ್‍ಟಿ, ಒಬಿಸಿ ಸಮುದಾಯಗಳ ಸ್ವಾಮೀಜಿಗಳ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಲಾಗುವುದು’
-ಮಾವಳ್ಳಿ ಶಂಕರ್, ದಸಂಸ ಪ್ರದಾನ ಸಂಚಾಲಕ