ಬೆಳಗಾವಿ ಅಧಿವೇಶನಕ್ಕೆ ಹೊಸ ಮುಖ್ಯಮಂತ್ರಿ : ಸುನೀಲ್ ಕುಮಾರ್

Update: 2024-11-14 12:33 GMT

ವಿ.ಸುನೀಲ್ ಕುಮಾರ್

ಬೆಂಗಳೂರು : ‘ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿನ ಬೆಳವಣಿಗೆಗಳು, ನಾಯಕರ ಒಳ ಸಭೆಗಳನ್ನು ನೋಡಿದರೆ ಮುಖ್ಯಮಂತ್ರಿ ಕುರ್ಚಿಗೆ ಆಪತ್ತು ಇದೆ ಎಂದು ಅನ್ನಿಸುತ್ತಿದೆ. ಹೀಗಾಗಿ ಬೆಳಗಾವಿ ಅಧಿವೇಶನ ಹೊಸ ಮುಖ್ಯಮಂತ್ರಿಯೊಂದಿಗೆ ನಡೆಯುವ ಸಾಧ್ಯತೆಗಳಿವೆ’ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ.ಸುನೀಲ್ ಕುಮಾರ್ ಭವಿಷ್ಯ ನುಡಿದಿದ್ದಾರೆ.

ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಉಪ ಚುನಾವಣೆ ಫಲಿತಾಂಶಕ್ಕೆ ಮೊದಲೇ ಸೋಲಿನ ಮುನ್ಸೂಚನೆ ಸಿಕ್ಕಿರುವ ಹಿನ್ನೆಲೆಯಲ್ಲಿ ಸಿಎಂ ತನ್ನ ಸ್ಥಾನಕ್ಕೆ ಚ್ಯುತಿ ಬರುವ ಭಾವನೆಯನ್ನು ಕಣ್ಮುಂದೆ ಇಟ್ಟುಕೊಂಡು ‘ನಮ್ಮ ಶಾಸಕರನ್ನು ಬಿಜೆಪಿಯವರು ಖರೀದಿಸುತ್ತಿದ್ದಾರೆ’ ಎಂಬ ಹುಸಿ ಸುಳ್ಳನ್ನು ಹೇಳುತ್ತಿದ್ದಾರೆಂದು ಟೀಕಿಸಿದರು.

ಸಿಎಂ ಇಲ್ಲಿನತನಕ ತನ್ನ ಅಧಿಕಾರಾವಧಿಯಲ್ಲಿ ನೂರು ಸುಳ್ಳು ಹೇಳಿದ್ದು, ಇದು ನೂರ ಒಂದನೇ ಸುಳ್ಳು ಎಂದು ಅಂದುಕೊಳ್ಳುವೆ. ಆಡಳಿತ ಪಕ್ಷವನ್ನು ಬೆದರಿಸಲು ಪ್ರತಿಪಕ್ಷದ ಹೆಗಲ ಮೇಲೆ ಬಂದೂಕು ಇಟ್ಟುಕೊಂಡು ಆಡಳಿತ ಪಕ್ಷದ ಶಾಸಕರು, ಹೈಕಮಾಂಡನ್ನು ಹೆದರಿಸುವ ಪ್ರಯತ್ನವನ್ನು ಸಿದ್ದರಾಮಯ್ಯ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಮುಡಾ, ವಾಲ್ಮೀಕಿ ಹಗರಣದಲ್ಲಿ ಶಾಸಕರ ನಡುವಿನ ದೊಡ್ಡ ಪ್ರಮಾಣದ ಅಸಮಾಧಾನಗಳು ಸ್ಫೋಟಗೊಳ್ಳುತ್ತಿವೆ. ತನ್ನ ಕುರ್ಚಿಗೆ ಅಪಾಯ ಇದೆ ಎಂಬುದನ್ನು ಅರ್ಥ ಮಾಡಿಕೊಂಡು, ಪರೋಕ್ಷವಾಗಿ ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು 50ಕೋಟಿ ರೂ.ಆಮಿಷವನ್ನು ತಮ್ಮ ಶಾಸಕರ ಮೇಲೆ ಹೇಳುತ್ತಿದ್ದಾರೆ. ಸರಕಾರ ಅಧಿಕಾರಕ್ಕೆ ಬಂದು 2 ವರ್ಷಗಳಾಗುತ್ತಿರುವ ಸಂದರ್ಭದಲ್ಲಿ, ಯಾವುದೇ ಅನುದಾನವಿಲ್ಲದೆ ಅಭಿವೃದ್ಧಿಯ ಚಟುವಟಿಕೆಗಳು ಸಂಪೂರ್ಣ ನಾಶವಾಗಿರುವ ಸಂದರ್ಭದಲ್ಲಿ ಆಡಳಿತ ಪಕ್ಷದ ಶಾಸಕರೇ ಅಸಮಾಧಾನಗೊಂಡಿದ್ದಾರೆ ಎಂದು ವಿವರಿಸಿದರು.

ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು, ಅನುದಾನ ಕೊಡಲಾಗದ ಅಸಹಾಯಕ ಸ್ಥಿತಿಯಲ್ಲಿ ತಮ್ಮ ಶಾಸಕರನ್ನೇ ಖರೀದಿ ಮಾಡಿಕೊಳ್ಳುವ ಪರೋಕ್ಷ ಸಂದೇಶವನ್ನು ಸಿಎಂ ಕೊಟ್ಟಿದ್ದಾರೆ. ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು 50 ಕೋಟಿ ರೂ.ಯಾದರೂ ಕೊಡಲಿ, ನೂರು ಕೋಟಿ ರೂ.ಗಳನ್ನಾದರೂ ಕೊಡಲಿ. ಆದರೆ, ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಹೊಸ ಸಂಪ್ರದಾಯಕ್ಕೆ ಹೋಗುತ್ತಿರುವುದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂದು ನುಡಿದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News