ಮಕ್ಕಳಿಗಾಗಿ ಕಾಂಗ್ರೆಸ್‌ನಿಂದ ನೂತನ ಘಟಕ : ಡಿ.ಕೆ.ಶಿವಕುಮಾರ್

Update: 2024-11-14 12:27 GMT

ಡಿ.ಕೆ.ಶಿವಕುಮಾರ್

ಬೆಂಗಳೂರು : ನೆಹರೂ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಈ ವರ್ಷ ಪಕ್ಷದಲ್ಲಿ ಹೊಸ ಘಟಕ ಆರಂಭಿಸಲಾಗಿದೆ. ಹೊಸ ಪೀಳಿಗೆಗೆ ಪಕ್ಷದ ಆಚಾರ-ವಿಚಾರ, ಜಾತ್ಯತೀತ ತತ್ವವನ್ನು ಯುವ ಪೀಳಿಗೆಗಳಿಗೆ ಸಣ್ಣ ವಯಸ್ಸಿನಿಂದಲೇ ಅರಿವು ಮೂಡಿಸಲು ‘ಜವಾಹರ್ಲಾಲ್ ಬಾಲ ಮಂಚ್’ನ್ನು ಆರಂಭಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಗುರುವಾರ ಕೆಪಿಸಿಸಿ ಕಚೇರಿಯ ಭಾರತ ಜೋಡೋ ಭವನದಲ್ಲಿ ನಡೆದ ನೆಹರೂ ಜಯಂತಿ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನೆಹರೂರ ಜನ್ಮದಿನವನ್ನು ಮಕ್ಕಳ ದಿನವಾಗಿ ಆಚರಣೆ ಮಾಡಲಾಗುತ್ತದೆ. ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ನಂತೆ ಇದು ಹೊಸ ಘಟಕವಾಗಿದೆ. ದೇಶದಾದ್ಯಂತ ಸಂವಿಧಾನ, ಜಾತ್ಯತೀತ ತತ್ವ ಹಾಗೂ ಪಕ್ಷದ ಸಂವಿಧಾನದ ಬಗ್ಗೆ ಮಾಹಿತಿ ನೀಡಲಾಗುವುದು. ಪಕ್ಷದ ಎಲ್ಲ ನಾಯಕರು ತಮ್ಮ ವ್ಯಾಪ್ತಿಯಲ್ಲಿ ಈ ಘಟಕಕ್ಕೆ ಹೆಚ್ಚಿನ ಉತ್ತೇಜನ ನೀಡಬೇಕು ಎಂದು ಸಲಹೆ ನೀಡಿದರು.

ವಿಧಾನಸೌಧದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿನ ಸರಕಾರಿ ಶಾಲಾ ಮಕ್ಕಳ ಜತೆಗೆ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿವಿಧ ಶಾಲೆಗಳ 300 ಶಾಲಾ ಮಕ್ಕಳೊಂದಿಗೆ ನಾನು ಹಾಗೂ ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸಂವಾದ ಮಾಡಿದೆವು. ಮಕ್ಕಳ ಆಸೆ, ಆಲೋಚನೆಗಳ ಬಗ್ಗೆ ಚರ್ಚೆ ಮಾಡಿದೆವು ಎಂದು ಹೇಳಿದರು.

‘ಎಲ್ಲರೂ ಒಟ್ಟಾಗಿ ಸೇರಿ ಭೇದ-ಭಾವ ತೊರೆದು ಬದುಕುವ ನಾವು ಭಾರತೀಯರು ಎಂದು ಗಟ್ಟಿಯಾಗಿ ಹೇಳುವ ಎಂಬ ನೆಹರೂ ಅವರ ಸಂದೇಶದಂತೆ ನಾವು ಬದುಕೋಣ ಎಂದ ಅವರು, ದೇಶದ ನಿರ್ಮಾಣಕ್ಕಾಗಿ ಮಾಜಿ ಪ್ರಧಾನಿ ನೆಹರೂ ಅವರು ಹಾಕಿರುವ ಭದ್ರ ಬುನಾದಿಗೆ ಬೆಂಗಳೂರು ಸಾಕ್ಷಿ ಎಂದು ನುಡಿದರು.

ನೆಹರೂ ಬೆಂಗಳೂರಿನಲ್ಲಿ ಸಾರ್ವಜನಿಕ ಉದ್ದಿಮೆಗಳು ಎಚ್ಎಎಲ್, ಐಟಿಐ, ಬಿಇಎಂಎಲ್, ಬಿಇಎಲ್, ಇಸ್ರೋ ಸಹಿತ ಅನೇಕ ಉದ್ದಿಮೆಗಳು ಆರಂಭಿಸಿದರು. ಇಲ್ಲಿರುವ ಮಾನವ ಸಂಪನ್ಮೂಲ, ಗುಣಮಟ್ಟದ ಶಿಕ್ಷಣದ ಮೇಲೆ ವಿಶೇಷ ಆದ್ಯತೆ ನೀಡಿದರು. ಅವರು ಹಾಕಿಕೊಟ್ಟ ಅಡಿಪಾಯದಲ್ಲಿ ನಾವು ಇಂದು ಈ ದೇಶ ಕಟ್ಟುತ್ತಿದ್ದೇವೆ ಎಂದರು.

ಮಕ್ಕಳಿಗೆ ಶಿಕ್ಷಣ ಸಿಗಬೇಕು, ಮಕ್ಕಳು ಶಾಲೆಯಿಂದ ವಿಮುಖರಾಗಬಾರದು ಎಂದು ಎಸ್.ಎಂ.ಕೃಷ್ಣ ಅವಧಿಯಲ್ಲಿ ಬಿಸಿಯೂಟ ಕಾರ್ಯಕ್ರಮ ನೀಡಲಾಯಿತು. ಸಿದ್ದರಾಮಯ್ಯರ ಸರಕಾರದಲ್ಲಿ ಶಾಲಾ ಮಕ್ಕಳಿಗೆ ಶೂ, ಸಾಕ್ಸ್, ಕ್ಷೀರಭಾಗ್ಯ, ಮೊಟ್ಟೆ ಭಾಗ್ಯ ನೀಡಿ ಪೌಷ್ಠಿಕತೆ ಹೆಚ್ಚಿಸಿದರು. ಇಂದಿರಾ ಗಾಂಧಿ ಕಾಲದಲ್ಲಿ ಅಂಗನವಾಡಿ ಕಾರ್ಯಕ್ರಮ ಮಾಡಲಾಯಿತು. ಹೀಗೆ ಕಾಂಗ್ರೆಸ್ ಸರಕಾರ ಸದಾ ಮಕ್ಕಳಿಗೆ ಆದ್ಯತೆ ನೀಡುತ್ತಾ ಬಂದಿದೆ ಎಂದು ಹೇಳಿದರು.

ಇನ್ನು ಈ ವರ್ಷದಿಂದ ಗ್ರಾಮೀಣ ಭಾಗದಲ್ಲಿ ಪಂಚಾಯತ್ ಮಟ್ಟದಲ್ಲಿ 2ಸಾವಿರ ಸಿಎಸ್ಆರ್ ಶಾಲೆಗಳನ್ನು ಆರಂಭಿಸಲು ಮುಂದಾಗಿದ್ದೇವೆ. ಇದಕ್ಕಾಗಿ ನನ್ನನ್ನು ಸೇರಿದಂತೆ ನಾಲ್ಕೈದು ಮಂತ್ರಿಗಳಿಗೆ ಸಿಎಂ ಜವಾಬ್ದಾರಿ ನೀಡಿದ್ದು, ಈಗಾಗಲೇ 50ಶಾಲೆಗಳ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಹೀಗೆ ಸರಕಾರ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಕೆ.ಜೆ.ಜಾರ್ಜ್, ಝಮೀರ್ ಅಹ್ಮದ್ ಖಾನ್, ಡಾ.ಜಿ.ಪರಮೇಶ್ವರ್, ಕೆ.ಎಚ್.ಮುನಿಯಪ್ಪ, ಎನ್.ಎಸ್.ಭೋಸರಾಜು, ಸಿಎಂ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದ ರಾಜು ಸೇರಿದಂತೆ ಪಕ್ಷದ ಮುಖಂಡರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News