ಲೋಕಸಭೆ ಚುನಾವಣೆಯಲ್ಲಿ ನಮ್ಮ ತಪ್ಪಿನಿಂದಲೇ ಕೆಲ ಕ್ಷೇತ್ರಗಳಲ್ಲಿ ಹಿನ್ನಡೆ : ಯಡಿಯೂರಪ್ಪ

Update: 2024-07-04 16:29 GMT

Photo : x/@BSYBJP

ಬೆಂಗಳೂರು: ‘ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಕೆಲ ಕ್ಷೇತ್ರದಲ್ಲಿ ನಮ್ಮ ಕಡೆಯಿದ ಆದ ತಪ್ಪಿನಿಂದ ಸ್ವಲ್ಪ ಹಿನ್ನಡೆ ಅನುಭವಿಸಿದ್ದೇವೆ. ಆದರೆ, ಜನರು ಸ್ಪಷ್ಟವಾಗಿ ಕಾಂಗ್ರೆಸ್‍ನ ದುರಾಡಳಿತದ ವಿರುದ್ಧ ಮತ ನೀಡಿದ್ದಾರೆ’ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಗುರುವಾರ ಇಲ್ಲಿನ ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ರಾಜ್ಯ ಸರಕಾರ ತನ್ನ ತಪ್ಪು ನೀತಿಗಳಿಂದ ದಿವಾಳಿ ಅಂಚಿಗೆ ಬಂದಿದೆ, ಶಾಸಕರಿಗೆ ಅನುದಾನ ನೀಡಿಲ್ಲ, ಎಲ್ಲ ತೆರಿಗೆ ಹೆಚ್ಚಿಸಿ ಬೆಲೆ ಏರಿಕೆಗೆ ನಾಂದಿ ಹಾಡಿದ್ದಾರೆ. ಅಭಿವೃದ್ಧಿ ಕಾರ್ಯ ನಿಂತಿದೆ, ಖಜಾನೆ ಬರಿದಾಗಿದೆ’ ಎಂದು ದೂರಿದರು.

‘ಗ್ಯಾರಂಟಿಗಳನ್ನು ರದ್ದು ಮಾಡಿ ಅಭಿವೃದ್ಧಿಗೆ ಹಣ ನೀಡಿ ಎಂದು ಕಾಂಗ್ರೆಸ್ ಮುಖಂಡರೇ ಹೇಳುತ್ತಿದ್ದಾರೆ. ಸಿಕ್ಕ ಸಿಕ್ಕ ಕಡೆ ತೆರಿಗೆ ಹೆಚ್ಚಿಸಿ, ಸುಲಿಗೆ ಮಾಡಿ ಸಂಪನ್ಮೂಲ ಕ್ರೋಢೀಕರಿಸುತ್ತಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಡಿದೆ’ ಎಂದು ಅವರು ವಾಗ್ದಾಳಿ ನಡೆಸಿದರು.

ವಿಧಾನಸಭೆ ವಿಸರ್ಜಿಸಿ: ‘ಮುಖ್ಯಮಂತ್ರಿಯಾಗಿ ಮುಂದುವರೆಯುವ ನೈತಿಕತೆ ಸಿದ್ದರಾಮಯ್ಯ ಅವರಿಗೆ ಇಲ್ಲ. ತಾಕತ್ತಿದ್ದರೆ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಬರಲಿ ನೋಡೋಣ’ ಎಂದು ಸವಾಲು ಹಾಕಿದ ಯಡಿಯೂರಪ್ಪ, ಇದೀಗ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆದರೆ ಬಿಜೆಪಿ 130-135ಸ್ಥಾನಗಳನ್ನು ಗೆಲ್ಲಲಿದೆ ಎಂದು ನುಡಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದ ಬೆನ್ನಲ್ಲೇ ಮೈಸೂರು ಮುಡಾ ಹಗರಣ ಬೆಳಕಿಗೆ ಬಂದಿದೆ. ಸಿಎಂ ಕುಟುಂಬದವರು ಇದರಲ್ಲಿ ಭಾಗಿಯಾಗಿದ್ದು, ಸಿಎಂ ಕೈವಾಡ ಇದರಲ್ಲಿದೆ. ಇದನ್ನು ಜನರಿಗೆ ತಿಳಿಸುವ ಕೆಲಸ ಮಾಡಬೇಕಿದೆ. ಕಾಂಗ್ರೆಸ್ ದುರಾಡಳಿತ ಮತ್ತು ಕೇಂದ್ರದ ಜನಪರ ಕಾರ್ಯಗಳನ್ನು ಜನರಿಗೆ ತಿಳಿಸಬೇಕು ಎಂದು ಯಡಿಯೂರಪ್ಪ ಸಲಹೆ ನೀಡಿದರು.

ಹೋರಾಟ ನಡೆಸಿ: ‘ಭ್ರಷ್ಟಾಚಾರ ಆರೋಪಗಳು ಮತ್ತು ಲೋಕಸಭಾ ಚುನಾವಣೆಯಲ್ಲಿನ ಸೋಲಿನ ಕಾರಣಕ್ಕೆ ಸಿಎಂ ಸ್ಥಾನದಲ್ಲಿ ಮುಂದುವರೆಯುವ ನೈತಿಕತೆ ಸಿದ್ದರಾಮಯ್ಯರಿಗೆ ಇಲ್ಲ. ಹೀಗಾಗಿ ಅವರು ಕೂಡಲೇ ಅಧಿಕಾರ ಬಿಟ್ಟು ಕೆಳಗಿಳಿಯಬೇಕು. ಅಲ್ಲಿಯವರೆಗೂ ಬಿಜೆಪಿ ಹೋರಾಟ ನಡೆಸಬೇಕು ಎಂದು ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾಮೋಹನ್ ಅಗರವಾಲ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News