ಎಚ್‍ಡಿಕೆ ವಿರುದ್ಧ ಕಾನೂನು ಕ್ರಮ ವಹಿಸಲು ಸಿಎಸ್‍ಗೆ ಪುಟ್ಟರಾಜು ಪತ್ರ
ಬೆಂಗಳೂರು : ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಲೋಕಾಯುಕ್ತ ಕಚೇರಿಗೆ ತನಿಖೆಗೆ ಆಗಮಿಸಿ ನಂತರ ಸುದ್ದಿಗೋಷ್ಠಿಯಲ್ಲಿ ಲೋಕಾಯುಕ್ತ ವಿಶೇಷ ತನಿಖಾ ತಂಡದ ಮುಖ್ಯಸ್ಥ ಎಂ.ಚಂದ್ರಶೇಖರ್ ಬಗ್ಗೆ ಏಕವಚನದ ಪದಗಳನ್ನು ಬಳಸಿ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಭಯ ಹುಟ್ಟಿಸುವ ರೀತಿಯಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರ ವಿರುದ್ದ ಕಾನೂನು ಕ್ರಮವಹಿಸಬೇಕು ಎಂದು ಕರ್ನಾಟಕ ಕಾಂಗ್ರೆಸ್ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಪುಟ್ಟರಾಜು.ವೈ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ಎಚ್‍ಡಿಕೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಾಯಿ ವೆಂಕಟೇಶ್ವರ ಮಿನರಲ್ ಕಂಪೆನಿಗೆ ಗಣಿಗಾರಿಕೆ ನಡೆಸಲು ಅನುಮತಿ ನೀಡಿದ್ದ ಪ್ರಕರಣದ ಕುರಿತು ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ತನಿಖೆ ನಡೆಯುತ್ತಿದೆ. ವಿಶೇಷ ತನಿಖಾ ತಂಡದ ಮುಖ್ಯಸ್ಥ ಎಂ. ಚಂದ್ರಶೇಖರ್ ರವರ ತನಿಖೆಗೆ ಅಡ್ಡಿಪಡಿಸುವ ಉದ್ದೇಶದಿಂದ ಎಚ್.ಡಿ.ಕುಮಾರಸ್ವಾಮಿ ಅವರು ಅವರ ವಿರುದ್ಧ ವೈಯಕ್ತಿಕವಾಗಿ ನಿಂದನೆ ಹಾಗೂ ಆಧಾರ ರಹಿತವಾದ ಆರೋಪವನ್ನು ಮಾಡಿರುತ್ತಾರೆ. ಲೋಕಾಯುಕ್ತ ತನಿಖಾ ತಂಡದ ಮುಖ್ಯಸ್ಥರಿಗೆ ಈ ರೀತಿ ಬೆದರಿಕೆ ಹಾಕುವುದರ ಮೂಲಕ ತನಿಖೆಯ ದಾರಿ ತಪ್ಪಿಸುವುದು ಹಾಗೂ ತನಿಖಾಧಿಕಾರಿಗಳ ಶಕ್ತಿಯನ್ನು ಕುಗ್ಗಿಸುವ ಪ್ರಯತ್ನವನ್ನು ಆರೋಪಿ ಸ್ಥಾನದಲ್ಲಿರುವ ಎಚ್.ಡಿ.ಕುಮಾರಸ್ವಾಮಿ ಬಹಿರಂಗವಾಗಿ ಮಾಡಿದ್ದಾರೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲು ಮುಂದಾಗಿರುವ ಅಧಿಕಾರಿಗಳಿಗೆ ಈ ರೀತಿ ವಾಮ ಮಾರ್ಗದಲ್ಲಿ ಬೆದರಿಸುವ ತಂತ್ರ ಅನುಸರಿಸುತ್ತಿರುವುದು ಕುಮಾರಸ್ವಾಮಿ ಅವರ ವಾಡಿಕೆಯಾಗಿದೆ ಅವರ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.